ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಳೆದ ಎಪ್ಪತ್ತೇಳು ದಿನಗಳಿಂದ ಮುಚ್ಚಿದ್ದ ದೇವಸ್ಥಾನಗಳ ಬಾಗಿಲು ಸೋಮವಾರ ತೆರೆದಿದ್ದರೂ ಭಕ್ತರ ಸಂಖ್ಯೆ ವಿರಳವಾಗಿತ್ತು. ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹೊರತು ಪಡಿಸಿ, ಆನೆಗುಡ್ಡೆ, ಹಟ್ಟಿಯಂಗಡಿ, ಸೌಕೂರು ಶ್ರೀ ದುರ್ಗಾಪರಮೇಶ್ವರಿ, ಶಂಕರನಾರಾಯಣ, ಕುಂದೇಶ್ವರ, ಬೈಂದೂರು ಶ್ರೀ ಸೇನೇಶ್ವರ, ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನ ಭಕ್ತರಿಗಾಗಿ ತೆರೆದುಕೊಂಡಿತ್ತು.
ದಕ್ಷಿಣ ಭಾರತದ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಬರೋಬ್ಬರಿ 77 ದಿನಗಳ ನಂತರ ಮೂಕಾಂಬಿಕೆ ಭಕ್ತರಿಗೆ ದರ್ಶನ ಕೊಟ್ಟಿದ್ದಾಳೆ. ಬೆಳಗ್ಗೆ 5:30 ದೇವಸ್ಥಾನದಲ್ಲಿ ಭಕ್ತರಿಗೆ ದೇವರನ್ನು ಕಣ್ತುಂಬಿಕೊಳ್ಳಲು ಅವಕಾಶ ಕೊಡಲಾಯಿತು. ದೇವಸ್ಥಾನ ಸಿಬ್ಬಂದಿ ಒಟ್ಟಾಗಿ ಪ್ರಪಂಚವನ್ನು ವ್ಯಾಪಿಸಿದ ಕರೋನಾ ನಿರ್ಮೂಲನೆಗಾಗಿ ಚಂಡಿ ಹೋಮ ನೆರವೇರಿಸಿ, ಆದಿಗುರು ಶ್ರೀ ಶಂಕರಾಚಾರ್ಯ ಫಿಠದ ಬಳಿ ಔಷಧೀಯ ಸಸ್ಯಗಳ ನೆಟ್ಟ್ಟು ಕರೋನಾ ದೂರ ಮಾಡುವಂತೆ ತಾಯಿ ಮೂಕಾಂಬಿಕೆ ಬೇಡಿಕೊಂಡರು. ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೆಳಗ್ಗೆ5:30 ಕೊಲ್ಲೂರಿನ ಸ್ಥಳೀಯ ಭಕ್ತರು ಮೂಕಾಂಬಿಕೆ ಕಣ್ತುಂಬಿಕೊಳ್ಳಲು ಸರತಿ ಸಾಲಿನಲ್ಲಿ ನಿಂತಿದ್ದರು. ಸರ್ಕಾರದ ನಿಯಮದಂತೆ ಭಕ್ತರಿಗೆ ಕೈಕಾಲು ತೊಳೆಯುವ, ಸ್ಯಾನಿಟೈಸ್ ಮಾಡಿ ಮತ್ತು ಥರ್ಮಲ್ ಸ್ಕ್ಯಾನಿಂಗ್ ಮಾಡಿ ಸಿಬ್ಬಂದಿ ಭಕ್ತರನ್ನು ದೇವಸ್ಥಾನದ ಒಳಗೆ ಬಿಟ್ಟರು. ದೇವಸ್ಥಾನದ ಪ್ರಾಂಗಣದ ತುಂಬೆಲ್ಲಾ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿತ್ತು.
ಸಾಮಾಜಿಕ ಅಂತರ ಕಾಪಾಡುವ ಉದ್ದೇಶದಿಂದ ದೇಗುಲದ ಗರ್ಭಗುಡಿಯ ಸಮೀಪ ಭಕ್ತರಿಗೆ ಹೋಗುವ ಅವಕಾಶ ಇರಲಿಲ್ಲ. ಧ್ವಜಸ್ತಂಭದ ಸಮೀಪ ನಿಂತು ದೇವರನ್ನು ದರ್ಶನ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿತ್ತು. ಗರ್ಭಗುಡಿ ಸಮೀಪ ಪ್ರವೇಶಿಸಬೇಕಾದರೆ ಈ ಹಿಂದಿನ ನಿಯಮದಂತೆ ಶರ್ಟ್ ಮತ್ತು ಬನಿಯನ್ ಕಳಚಿ ಒಳ ಪ್ರವೇಶಿಸಬೇಕಿತ್ತು. ಹೊಸ ನಿಯಮದ ಪ್ರಕಾರ ಭಕ್ತರಿಗೆ ದೇಗುಲ ಪ್ರವೇಶಕ್ಕೆ ಅವಕಾಶ ಇಲ್ಲದ ಕಾರಣ ಧ್ವಜಸ್ತಂಭದ ಕೆಳಭಾಗದಲ್ಲಿ ನಿಂತು ದೇವಿಯ ದರ್ಶನ ಮಾಡಿ ಮುಂದೆ ಸಾಗಿದರು.
ಕೊಲ್ಲೂರು ದೇವಸ್ಥಾನದ ಪ್ರಾಂಗಣದಲ್ಲಿ ಇರುವ ಯಾವುದೇ ಗುಡಿಗಳಿಗೆ ಭೇಟಿ ಕೊಡುವ ಅವಕಾಶ ಭಕ್ತರಿಗೆ ಸದ್ಯಕ್ಕಿಲ್ಲ. ಮೂಕಾಂಬಿಕಾ ದೇವಿಯ ದರ್ಶನ ಮಾಡಿ ನೇರವಾಗಿ ದೇವಸ್ಥಾನದ ಪ್ರಾಂಗಣದ ಒಳಗೆ ಹಾಕಿದ ಬ್ಯಾರಿಕೇಡ್ ಮೂಲಕ ತೆರಳಿ ಆನೆ ಬಾಗಿಲ ಮೂಲಕ ದೇವಸ್ಥಾನದ ಹೊರಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ/ಕುಂದಾಪ್ರ ಡಾಟ್ ಕಾಂ ಸುದ್ದಿ/
ಇದನ್ನೂ ಓದಿ:
► ಜೂ.8 ರಿಂದ ಜಿಲ್ಲೆಯಲ್ಲಿ ದೇವಾಲಯಗಳ ಆರಂಭ. ಇವಿಷ್ಟು ನಿಯಮ ಪಾಲನೆ ಕಡ್ಡಾಯ – https://kundapraa.com/?p=38342 .
►ಕೊಲ್ಲೂರು ಮೂಕಾಂಬಿಕೆಯ ದರ್ಶನಕ್ಕೆ ಅವಕಾಶ. ದೇವಸ್ಥಾನದಲ್ಲಿ ಸಿದ್ದತೆಗಳು ಹೇಗಿದೆ ನೋಡಿ – https://youtu.be/8Zb4RuIUqpQ .