Kundapra.com ಕುಂದಾಪ್ರ ಡಾಟ್ ಕಾಂ

ಮಳೆಗಾಲದಲ್ಲಿ ಕಳ್ಳತನ ನಡೆಯದಂತೆ ಮಂಜಾಗೃತೆ ವಹಿಸುವುದು ಅಗತ್ಯ: ಪಿಎಸೈ ಭೀಮಾಶಂಕರ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಮಳೆಗಾಲದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವುದರಿಂದ ದೇವಸ್ಥಾನ, ಚಿನ್ನದ ಅಂಗಡಿ ಸಹಿತ ಎಲ್ಲಾ ಕಡೆಗಳಲ್ಲಿ ಹೆಚ್ಚಿನ ಮುಂಜಾಗ್ರತೆ ವಹಿಸಬೇಕು. ಸಿಸಿ ಕ್ಯಾಮರಾ ಅಳವಡಿಕೆ, ಭದ್ರತಾ ಸಿಬ್ಬಂದಿ ನೇಮಕ ಮೊದಲಾದ ಕ್ರಮಗಳನ್ನು ಅನುಸರಿಸಬೇಕು ಎಂದು ಗಂಗೊಳ್ಳಿ ಪೊಲೀಸ್ ಠಾಣಾ ಉಪನಿರೀಕ್ಷಕ ಭೀಮಾಶಂಕರ ಎಸ್. ಹೇಳಿದರು.

ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಸಂಜೆ ಜರುಗಿದ ಗಂಗೊಳ್ಳಿ ಠಾಣಾ ವ್ಯಾಪ್ತಿಯ ಎಲ್ಲಾ ದೇವಸ್ಥಾನದ ಆಡಳಿತ ಮಂಡಳಿ ಮುಖ್ಯಸ್ಥರು, ಸಹಕಾರಿ ಸಂಘಗಳ ಪ್ರಮುಖರ ಹಾಗೂ ಚಿನ್ನದ ಅಂಗಡಿ ಮಾಲೀಕರ ಸಭೆಯಲ್ಲಿ ಮಾಹಿತಿ ನೀಡಿ ಅವರು ಮಾತನಾಡಿ ಸಿಸಿ ಕ್ಯಾಮರಾ ಚಾಲನೆಯಲ್ಲಿರುವುದನ್ನು ಖಚಿತಪಡಿಸಿಕೊಳ್ಳಲು ಆಗಾಗ್ಗ್ಯೆ ಪರಿಶೀಲನೆ ಮಾಡಬೇಕು. ರಾತ್ರಿ ವೇಳೆಯಲ್ಲಿ ಸಂಶಯಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದರು.

ರಾತ್ರಿ 9 ಗಂಟೆ ಬಳಿಕ ಕರ್ಫ್ಯೂ ಜಾರಿಯಲ್ಲಿರುವುದರಿಂದ ರಸ್ತೆಯಲ್ಲಿ ಯಾರೂ ತಿರುಗಾಡುವಂತಿಲ್ಲ. ರಾತ್ರಿ ವೇಳೆ ತಿರುಗಾಡುವುದು ಕಂಡು ಬಂದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸಲಾಗುವುದು. ಕರೋನಾ ಹರಡುವುದನ್ನು ತಡೆಗಟ್ಟಲು ಎಲ್ಲರೂ ಮಾಸ್ಕ್ ಧರಿಸಬೇಕು. ಎಲ್ಲಾ ಕಡೆಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು. ಕೋವಿಡ್-19 ಬಗ್ಗೆ ಯಾವುದೇ ಸಂಶಯಗಳಿದ್ದಲ್ಲಿ ಆರೋಗ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಯಾದ ಮಾಹಿತಿ ಪಡೆದುಕೊಳ್ಳಬೇಕು. ಕರೋನಾ ಬಗ್ಗೆ ಸುಳ್ಳು ಸುದ್ಧಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದರೆ ಕಠಿಣ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಅವರು ಹೇಳಿದರು.

ಕುಂದಾಪುರದಲ್ಲಿ ಪ್ರಾರಂಭಿಸಲಾಗಿರುವ ಸೇಫ್ ಕುಂದಾಪುರ ಪ್ರಾಜೆಕ್ಟ ಉತ್ತಮವಾಗಿದ್ದು, ದೇವಾಲಯಗಳು, ಅಂಗಡಿ ಮಾಲೀಕರು ಇದರಲ್ಲಿ ನೊಂದಾಯಿಸಿಕೊಳ್ಳಬಹುದು ಎಂದು ಅವರು ಹೇಳಿದರು.

ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ವಿವಿಧ ದೇವಾಲಯಗಳ ಆಡಳಿತ ಮಂಡಳಿ ಮುಖ್ಯಸ್ಥರು, ಸಹಕಾರಿ ಸಂಘಗಳ ಪ್ರಮುಖರು ಮತ್ತು ಚಿನ್ನದ ಅಂಗಡಿ ಮಾಲೀಕರು ಹಾಗೂ ಉದ್ಯಮಿಗಳು ಉಪಸ್ಥಿತರಿದ್ದರು. ಹೆಡ್ ಕಾನ್‌ಸ್ಟೇಬಲ್ ಗಿರೀಶ್ ಸ್ವಾಗತಿಸಿ ವಂದಿಸಿದರು.

 

Exit mobile version