Kundapra.com ಕುಂದಾಪ್ರ ಡಾಟ್ ಕಾಂ

ಹೊಳೆಯಲ್ಲಿ ಕೊಚ್ಚಿಹೋದ ಬಿದ್ದ ವಿಸ್ಮಯಳ ಶವ ಪತ್ತೆ

ಕುಂದಾಪುರ: ಕಳೆದ ಎರಡು ದಿನಗಳಿಂದ ನೀರಿನಲ್ಲಿ ಕೊಚ್ಚಿಹೋಗಿ ನಾಪತ್ತೆಯಾಗಿದ್ದ ಮಾರಣಕಟ್ಟೆ ಕಿರಿಯ ಪ್ರಾಥಮಿಕ ಶಾಲೆಯ ಮೂರನೇ ತರಗತಿಯ ವಿದ್ಯಾರ್ಥಿನಿ ವಿಸ್ಮಯ ದೇವಾಡಿಗಳ ಶವ ಚಿತ್ತೂರು ಗ್ರಾಮದ ನ್ಯಾಗಳಮನೆ ಸೇತುವೆಯ ಬಳಿ ಪತ್ತೆಯಾಗಿದೆ. ಬೆಳಿಗ್ಗೆ 9ಗಂಟೆಯ ವೇಳೆಗೆ ಬಳಿ ಸ್ಥಳೀಯರು ಗಮನಿಸಿದ್ದು ಬಳಿಕ ಆಕೆಯ ಶವ ದೊರೆತಿದೆ.

ಜೂನ್ 10ರಂದು ಬೆಳಿಗ್ಗೆ 8:45ರವೇಳೆಗೆ ಮಾರಣಕಟ್ಟೆಯ ಸನ್ಯಾಸಿಬೆಟ್ಟಿನಿಂದ ಶಾಲೆಗೆ ತೆರಳುತ್ತಿದ್ದ ವಿಸ್ಮಯ ದೇವಾಡಿಗ(8) ತಾಯಿಯೊಂದಿಗೆ ಕಾಲುಸಂಕದ ಮೂಲಕ ಚಕ್ರಾನದಿಯನ್ನು ದಾಟುತ್ತಿದ್ದ ವೇಳೆ ಕಾಲುಜಾರಿ ನದಿಗೆ ಬಿದ್ದು ನೀರಿನಲ್ಲಿ ಕೊಚ್ಚಿಹೋಗಿದ್ದಳು.

ವಿಸ್ಮಯ ನೀರಿಗೆ ಬಿದ್ದ ಕೂಡಲೇ ಆಕೆಯ ರಕ್ಷಣೆಗೆ ನೀರಿಗೆ ಸ್ಥಳೀಯರೋರ್ವರು ಹಾರಿದರೂ, ತುಂಬಿ ಹರಿಯುತ್ತಿರುವ ನದಿಯಲ್ಲಿ ಆಕೆ ಕ್ಷಣಾರ್ಧದಲ್ಲಿ ಕೊಚ್ಚಿ ಹೋಗಿದ್ದಳು. ಶನಿವಾರ ಸಂಜೆಯ ತನಕವೂ ಈಜುಗಾರರು ಹಾಗೂ ಮುಳುಗುತಜ್ಞರು ನದಿಯಲ್ಲಿ ಹುಡುಕಾಡಿದರೂ ಯಾವುದೇ ಕುರುಹು ಸಿಗದಿರುವುದು ಕುಟುಂಬಿಕರಿಗೆ ಇನ್ನಷ್ಟು ನೋವಿಗೆ ದೂಡಿತ್ತು. ಕೊಲ್ಲೂರು ಪೊಲೀಸರು ಹಾಗೂ ಮಾರಣಕಟ್ಟೆ, ವಂಡ್ಸೆ, ಚಿತ್ತೂರು ಆಸುಪಾಸಿನ ನಿವಾಸಿಗಳು ಚಕ್ರಾ ನದಿಗೆ ಸೇರುವ ವಂಡ್ಸೆ, ಬೆಳ್ಳಾಲ ಹಾಗೂ ಗಂಗೊಳ್ಳಿ ಹೊಳೆಯವರೆಗೆ ಶೋಧಕಾರ್ಯ ಮುಂದುವರಿಸಿದ್ದರೂ ಶವ ಪತ್ತೆಯಾಗಿರಲಿಲ್ಲ.

ಭಾನುವಾರ ಬೆಳಿಗ್ಗೆ ಈಕೆಯ ಮೃತದೇಹ ನೀರಿನಲ್ಲಿ ತೇಲುತ್ತಿರುವುದನ್ನು ಗಮನಿಸಿದ ಸ್ಥಳಿಯರು ಶವವನ್ನು ಎತ್ತಲು ಹೋದರಾದರೂ ಕೂಡ ನೀರಿನ ಸೆಳೆತ ಜಾಸ್ಥಿಯಿದ್ದ ಕಾರಣ ಶವ ನೀರಿನಲ್ಲಿ ತೇಲುತ್ತಾ 2 ಕಿ.ಮೀ. ಮುಂದೆ ಸಾಗಿದ್ದು ಚಿತ್ತೂರು ಸಮೀಪದ ನ್ಯಾಗಳಮನೆ ಸೇತುವೆ ಸಮೀಪ ಸ್ಥಳೀಯರು ನೀರಿಗಿಳಿದು ಶವವನ್ನು ಮೇಲಕ್ಕೆತ್ತಿದ್ದಾರೆ.

Exit mobile version