Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದದಲ್ಲಿ ಚಿತಾಗಾರ ಲೋಕಾರ್ಪಣೆ

ಬೈಂದೂರು: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಧರ್ಮಾಧಿಕಾರಿ ಡಾ. ವೀರೆಂದ್ರ ಹೆಗ್ಗಡೆಯವರ ಮಾರ್ಗದರ್ಶನದಂತೆ  ರಾಜ್ಯದಲ್ಲಿ ಈಗಾಗಲೇ 371 ರುದ್ರಭೂಮಿ ಅಭಿವೃದ್ಧಿಗಾಗಿ 3.75ಕೋಟಿ ಅನುದಾನ ನೀಡಲಾಗಿದೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕುಂದಾಪುರ ತಾಲೂಕು ಯೋಜನಾಧಿಕಾರಿ ಅಮರನಾಥ ಶೆಟ್ಟಿ ಹೇಳಿದ್ದಾರೆ.

ಉಪ್ಪುಂದದ ಚಿಮ್ರಿಗುಡ್ಡೆಯ ಚಿತಾಗಾರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಹಿಂದಿನ ಕಾಲದಲ್ಲಿ ಮನುಷ್ಯ ಸಾವನ್ನಪ್ಪಿದಾಗ ಆ ಊರಿನ ಎಲ್ಲಾ ಗ್ರಾಮಸ್ಥರು ಸಂಘಟಿತರಾಗಿ ಆತನ ಅಂತ್ಯ ಸಂಸ್ಕಾರ ನೆರವೇರಿಸುತ್ತಿದ್ದರು, ಆದರೆ ಈಗ ಬದಲಾದ ಕಾಲಘಟ್ಟದಲ್ಲಿ ಮನುಷ್ಯ ಸಾವನ್ನಪ್ಪಿದ್ದಾಗ ಅವನ ಕುಟುಂಬಕ್ಕೆ ಸಾವಿನ ದುಃಖದೊಂದಿಗೆ ಅಂತ್ಯ ಸಂಸ್ಕಾರದ ಬಗ್ಗೆಯೂ ಚಿಂತಿಸಬೇಕಾಗಿದೆ. ಆ ಹಿನ್ನೆಲೆಯಲ್ಲಿ ಇಂದು ಪರ್ಯಾಯ ವ್ಯವಸ್ಥೆಯಾಗಿ ಚಿತಗಾರಗಳು ಅನಿವಾರ‍್ಯವಾಗಿ ಬಿಟ್ಟಿದೆ, ಯಾವ ಊರಿನಲ್ಲಿ ಚಿತಾಗಾರವಿಲ್ಲವೋ, ಆ ಊರಿಗೆ ಸಂಸ್ಕಾರವಿಲ್ಲ ಎನ್ನುವಂತಾಗಿದೆ ಎಂದರು.

ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಿದ ಈ ಚಿತಾಗಾರವು ಉತ್ತಮ ಮೂಲ ಸೌಕರ್ಯ ಹೊಂದಿದ್ದು,  ಇದರ ಪರಿಪಾಲನೆ ಹಾಗೂ ಶುಚಿತ್ವಕ್ಕೆ ಆದ್ಯತೆ ನೀಡಬೇಕಾಗಿದೆ.  ಮುಂದಿನ ದಿನಗಳಲ್ಲಿ ಇದರ ವಿದ್ಯುತ್ತೀಕರಣಕ್ಕೂ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ನೆರವು ನೀಡಲಾಗುವುದು ಎಂದರು.

ಗ್ರಾ.ಪಂ. ಅಧ್ಯಕ್ಷೆ ದುರ್ಗಮ್ಮ ಅಧ್ಯಕ್ಷತೆ ವಹಿಸಿದ್ದರು, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಚಿತಾಗಾರ ಲೋಕರ್ಪಣೆಗೊಳಿಸಿದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಸದಸ್ಯ ಪ್ರಸನ್ನ ಕುಮಾರ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಮದನ ಕುಮಾರ, ಖಾರ್ವಿ ಯಾನೆ ಹರಿಕಾಂತ ಮಹಾಜನ ಸಂಘದ ಅಧ್ಯಕ್ಷ ನವೀನಚಂದ್ರ, ಬೈಂದೂರು ವಲಯ ನಾಡದೋಣಿ ಮೀನುಗಾರ ಸಂಘದ ಅಧ್ಯಕ್ಷ ಬಿ. ಕುಮಾರ, ಶ್ರೀರಾಮ ಭಜನಾ ಮಂದಿರದ ಅಧ್ಯಕ್ಷ ರಾಮಚಂದ್ರ, ಗ್ರಾ.ಪಂ. ಉಪಾಧ್ಯಕ್ಷೆ ಶಿಂಗಾರಿ ಶೆಡ್ತಿ ಉಪಸ್ಥಿತರಿದ್ದರು.

 ಇದೇ ಸಂದರ್ಭದಲ್ಲಿ ಸೀತಾರಾಮ ಖಾರ್ವಿ ಹಾಗೂ ದುರ್ಗಿ ಪೂಜಾರಿ ಉಪ್ಪುಂದ ಅವರನ್ನು ಸನ್ಮಾನಿಸಲಾಯಿತು.

ಉಪ್ಪುಂದ ಚಿಮ್ರಿಗುಡ್ಡೆ ಹಿಂದೂ ರುದ್ರಭೂಮಿ ಕ್ರಿಯಾ ಸಮಿತಿಯ ಅಧ್ಯಕ್ಷ ಮೋಹನ್‌ಚಂದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು, ರಾಘವ ಪೂಜಾರಿ ಸ್ವಾಗತಿಸಿ, ಸುಬ್ರಹ್ಮಣ್ಯ ನಿರೂಪಿಸಿದರು.

Exit mobile version