ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಕೋವಿಡ್-19 ವಿರುದ್ದದ ಹೋರಾಟದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರ ರೀತಿಯಲ್ಲಿ, ಸಮಾಜದಲ್ಲಿ ಕೊರೋನಾ ಕುರಿತಂತೆ ಜಾಗೃತಿ ಮೂಡಿಸುತ್ತಿರುವ ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿ ಡಾ| ಅಲಕಾನಂದ ರಾವ್ ಹೇಳಿದ್ದಾರೆ.
ಅವರು ಬುಧವಾರ, ಉಡುಪಿಯ ಆಯುಷ್ ಇಲಾಖೆಯಲ್ಲಿ , ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ನಡೆದ, ವೈದ್ಯರ ದಿನಾಚಾರಣೆ ಕಾರ್ಯಕ್ರಮ ಉದ್ಘಾಟಿಸಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಪತ್ರಕರ್ತರಿಗೆ ಕೋವಿಡ್-19 ಗೆ ಸಂಬಂಧಿಸಿದ ರೋಗ ನಿರೋಧಕ ಶಕ್ತಿ ವೃದ್ಧಿಸುವ ಆಯುಷ್ ಮಾತ್ರೆ ಹಾಗೂ ಚ್ಯವನಪ್ರಾಶ ವಿತರಿಸಿ ಮಾತನಾಡಿದರು.
ಕೋರೋನಾ ವಿರುದ್ದ ಹೋರಾಟದಲ್ಲಿ, ಆಯುರ್ವೇದ ವೈದ್ಯರು ಕೂಡ ವಾರಿಯರ್ಸ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕು ನಿಯಂತ್ರಣ ತರುವಲ್ಲಿ ಆಯುರ್ವೇದ ವೈದ್ಯರ ಪಾತ್ರ ಕೂಡ ಇದೆ , ಪತ್ರಕರ್ತರು ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದು, ಸಾರ್ವಜನಿಕರ ನಡುವೆಯೇ ಹೆಚ್ಚು ಇರುವುದರಿಂದ ಅವರೂ ಕೂಡಾ ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು.
ಕೋವಿಡ್-19 ನಿಂದ ರಕ್ಷಣೆ ಪಡೆಯಲು, ಆಯುಷ್ ಇಲಾಖೆಯಿಂದ ಸಿದ್ದಪಡಿಸಿರುವ, ರೋಗ ನಿರೋಧಕ ಶಕ್ತಿ ಹೆಚ್ಚಿಸುವ , ಅರ್ಯುರ್ವೇದ, ಯುನಾನಿ ಮತ್ತು ಹೋಮಿಯೋಪತಿಯ ಮಾತ್ರೆಗಳನ್ನು ಹಾಗೂ ವಿಟಮಿನ್ ಸಿ ಅಧಿಕವಾಗಿರುವ ಚ್ಯವನಪ್ರಾಶನಗಳನ್ನು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಶಿವಕುಮಾರ್ ಅವರ ಮೂಲಕ ಪತ್ರಕರ್ತರಿಗೆ ಡಾ. ಅಲಕಾನಂದ ರಾವ್ ವಿತರಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ಶಿವಕುಮಾರ್ ಮಾತನಾಡಿ, ಪತ್ರಕರ್ತರು ಯಾವಾಗಲೂ ಸಮಯದ ಪರಿವಿಲ್ಲದೇ , ತಮ್ಮ ಆರೋಗವನ್ನೂ ಲೆಕ್ಕಿಸದೇ, ಕೋರೋನಾ ವಿರುದ್ದ ಹೋರಾಟದಲ್ಲಿ ಕೊರೋನಾ ವಾರಿಯರ್ಸ್ ಗಳಾಗಿ, ಸಾರ್ವಜನಿಕರಿಗೆ ಅರಿವು ಹಾಗೂ ಜಾಗೃತಿ ಮೂಡಿಸುತ್ತಿದ್ದು, ಪತ್ರಕರ್ತರ ಆರೋಗ್ಯದ ಹಿತದೃಷ್ಠಿಯಿಂದ ರೋಗನಿರೋಧಕ ಮಾತ್ರೆ ಮತ್ತು ಚ್ಯವನಪ್ರಾಶ ನೀಡಿರುವುದಕ್ಕೆ ಆಯುಷ್ ಇಲಾಖೆಗೆ ಅಭಿನಂದನೆ ಸಲ್ಲಿಸಿದರು.
ಕರ್ನಾಟಕ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ಉಡುಪಿ ಅಧ್ಯಕ್ಷೆ ಡಾ| ವೀಣಾ ಎನ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವೈಧ್ಯ ಡಾ| ದಿನಕರ ಡೋಂಗ್ರೆ ಅವರು ಆಹಾರ ಸೇವನೆ ಕುರಿತು ಮಾಹಿತಿ ನೀಡಿದರು. ಹೋಮಿಯೋಪತಿ ಕುರಿತು ಡಾ| ಅನ್ನಪೂರ್ಣ ಭಂಡಾರಿ, ಯುನಾನಿ ಕುರಿತು ಡಾ| ರುಕ್ಯಾಡ್ ಅಂಜುA ಮಾಹಿತಿ ನೀಡಿದರು.
ಸಂಘದ ಕಾರ್ಯದರ್ಶಿ ಸಂಧ್ಯಾಕುಮಾರಿ ವೇದಿಕೆಯಲ್ಲಿದ್ದರು. ಡಾ| ಪ್ರಕಾಶ್ ಪ್ರಾರ್ಥಿಸಿದರು. ಡಾ| ಪ್ರದೀಪ್ ಆರ್.ಶೆಟ್ಟಿ ವಂದಿಸಿದರು. ಡಾ| ಕೆ.ಸರ್ವೋತ್ತಮ ಶೆಟ್ಟಿ ನಿರೂಪಿಸಿದರು.