Site icon Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಕೊರೋನಾ ಪಾಸಿಟಿವ್. ಠಾಣೆ ಸೀಲ್ ಡೌನ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಸಂಚಾರ ಪೊಲೀಸ್ ಠಾಣೆಯ ಸಿಬ್ಬಂದಿಯೋರ್ವರಿಗೆ ಕೋವಿಡ್-19 ಸೋಂಕು ತಾಗಿರುವುದು ದೃಢವಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಠಾಣೆಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಲಾಗುತ್ತಿದೆ.

ಹೆಡ್ ಕಾನ್ಸ್‌ಟೇಬಲ್ ಒಬ್ಬರಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಅವರಿಗೆ ಕೋವಿಡ್-19 ತಪಾಸಣೆ ನಡೆಸಲಾಗಿತ್ತು. ವರದಿಯಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದ್ದು, ಅವರನ್ನು ಕುಂದಾಪುರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಠಾಣೆಯನ್ನು ಎರಡು ದಿನಗಳ ಕಾಲ ಸೀಲ್ ಡೌನ್ ಮಾಡಿ, ಸಂಚಾರಿ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿದ್ದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಹದಿನೈದು ದಿನಗಳ ಕಾಲ ಹೋಂ ಕ್ವಾರೆಂಟೈನ್ ಮಾಡಲಾಗುತ್ತದೆ. ಹೆಡ್ ಕಾನ್ಸ್‌ಟೇಬಲ್ ವಾಸವಿದ್ದ ಪೊಲೀಸ್ ಕ್ವಾಟ್ರಸ್ ಕೂಡ ಸೀಲ್ ಡೌನ್ ಮಾಡಲಾಗಿದೆ.

ಪೊಲೀಸ್ ಠಾಣೆಯನ್ನು ಸ್ಯಾನಿಟೈಸ್ ಮಾಡಲಾಗುವುದು. ಈ ಸಮಯದಲ್ಲಿ ಇಲ್ಲಿನ ಪ್ರವಾಸಿ ಬಂಗಲೆಯಲ್ಲಿ ತಾತ್ಕಾಲಿಕ ಠಾಣೆಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಕುಂದಾಪುರ ಉಪವಿಭಾಗ ಎಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

Exit mobile version