Kundapra.com ಕುಂದಾಪ್ರ ಡಾಟ್ ಕಾಂ

ವಿದ್ಯಾರ್ಥಿನಿಗೆ ಕಿರುಕುಳ: ಫೊಸ್ಕೋ ಅಡಿಯಲ್ಲಿ ಇಬ್ಬರ ಬಂಧನ : ಇನ್ನೋರ್ವ ಪರಾರಿ

ಕುಂದಾಪುರ: ಇಲ್ಲಿನ ಕೋಟೇಶ್ವರದ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿನಿಯೊಬ್ಬಳಿಗೆ ಬಸ್ಸಿಗೆ ಕಾಯುತ್ತಿದ್ದ ವೇಳೆ ಯುವಕರ ತಂಡವೊಂದು ಚೀಟಿಯಲ್ಲಿ ಮೊಬೈಲ್ ಸಂಖ್ಯೆ ಬರೆದುಕೊಟ್ಟು ಸಾರ್ವಜನಿಕರ ಕೈಯಲ್ಲಿ ಸಿಕ್ಕಿ ಬಿದ್ದು, ಪೋಸ್ಕೋ ಕಾಯ್ದೆಯಡಿಯಲ್ಲಿ ಬಂಧನಕ್ಕೊಳಗಾದ ಘಟನೆ ನಡೆದಿದೆ. ಬಂಧಿತ ಆರೋಪಿಗಳನ್ನು ಗುಲ್ವಾಡಿಯ ನಿವಾಸಿಗಳಾದ ಸುಹೈಲ್ ಹಾಗೂ ಸಫಾನ್ ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ಶಫಿ ಎಂಬಾತ ಪರಾರಿಯಾಗಿದ್ದಾನೆ

ಘಟನೆಯ ವಿವರ: ಕಳೆದ ಕೆಲವು ದಿನಗಳಿಂದ ಈ ಯುವಕರು ಕೋಟೇಶ್ವರ ಬಸ್ ನಿಲ್ದಾಣದಲ್ಲಿ ಯುವತಿಯೊಬ್ಬಳ ಹಿಂದೆ ಬಿದ್ದಿದ್ದರು. ಆದರೆ ಯುವತಿ ಈ ವಿಚಾರವನ್ನು ಅಷ್ಟೇನೂ ಗಂಭೀರವಾಗಿ ಪರಿಗಣಿಸಿರಲಿಲ್ಲ. ಇದನ್ನೇ ದುರುಪಯೋಗಪಡಿಸಿಕೊಂಡ ಯುವಕರು ಮಧ್ಯಾಹ್ನದ ಸುಮಾರಿಗೆ ಕಾಲೇಜಿನಿಂದ ಹಿಂತಿರುಗಿದ ವಿದ್ಯಾರ್ಥಿನಿ ತನ್ನ ಊರಿಗೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದಾಗ ಚೀಟಿಯೊಂದರಲ್ಲಿ ಯುವಕನೊಬ್ಬನ ಮೊಬೈಲ್ ಸಂಖ್ಯೆ ಬರೆದು ನೀಡಿದ್ದಾರೆ. ಆಕೆ ಅದನ್ನು ತೆಗೆದುಕೊಳ್ಳಲು ನಿರಾಕರಿಸಿದಾಗ ಮತ್ತೆ ಪೀಡಿಸಿದ್ದಾರೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಸ್ಥಳೀಯ ಯುವಕರ ಗಮನಕ್ಕೆ ತಂದಿದ್ದಾರೆ. ತಕ್ಷಣ ಜಾಗೃತರಾದ ಸ್ಥಳೀಯರು ಯುವಕರನ್ನು ಹಿಡಿಯಲು ಪ್ರಯತ್ನಿಸಿದ್ದಾರೆ ಈ ಸಂದರ್ಭ ಇಬ್ಬರು ಸಿಕ್ಕಿಬಿದ್ದಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.

ನಂತರ ಕುಂದಾಪುರ ಪೊಲೀಸರಿಗೆ ಸುದ್ಧಿ ಮುಟ್ಟಿಸಲಾಗಿದ್ದು, ಸ್ಥಳಕ್ಕೆ ಬಂದ ಪ್ರಭಾರ ಎಸ್ಸೈ ಸುಬ್ಬಣ್ಣ ಹಾಗೂ ಸಿಬ್ಬಂದಿಗಳು ಆರೋಪಿ ಯುವಕರನ್ನು ಹಾಗೂ ವಿದ್ಯಾರ್ಥಿನಿಯನ್ನು ಠಾಣೆಗೆ ಕರೆದು ತಂದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭ ಯುವಕರು ತಪ್ಪೊಪ್ಪಿಕೊಂಡಿದ್ದಾರೆ. ವಿದ್ಯಾರ್ಥಿನಿಯ ತಂದೆಯನ್ನು ಕರೆಯಿಸಲಾಗಿದ್ದು, ಆರೋಪಿ ಯುವಕರ ವಿರುದ್ಧ ವಿದ್ಯಾರ್ಥಿನಿ ಲೈಂಗಿಕ ಕಿರುಕುಳ ದೂರು ನೀಡಿದ್ದಾಳೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪೋಸ್ಕೋ ಕಾಯ್ದೆಯಡಿಯಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

Exit mobile version