ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕೊರೋನಾ ಹರಡುವಿಕೆ ನಿಯಂತ್ರಿಸುವ ನಿಟ್ಟಿನಲ್ಲಿ ಕುಂದಾಪುರದ ಸಮಾನ ಮನಸ್ಕ ವರ್ತಕರು ಸ್ವಯಂಪ್ರೇರಿತವಾಗಿ ಮಧ್ಯಾಹ್ನ 2 ಗಂಟೆಯ ಬಳಿಕ ಮಾಡುತ್ತಿರುವ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರ ಭಾಗದಲ್ಲಿ ಒಂದಷ್ಟು ಅಂಗಡಿಗಳು ಮುಚ್ಚಿದ್ದು, ಉಳಿದ ಅಂಗಡಿಗಳು ಎಂದಿನಂತೆಯೇ ಕಾರ್ಯಾಚರಿಸುತ್ತಿದೆ. ಜೊತೆಗೆ ಬೆಳಗಿನ ಹೊತ್ತು ಜನಸಂಚಾರ ಹೆಚ್ಚಿದ್ದು, ಸಾಮಾಜಿಕ ಅಂತರ ಗಾಳಿಗೆ ತೂರಲಾಗಿದೆ.
ಜುಲೈ 13ರಿಂದ ಎಲ್ಲ ದಿನಸಿ, ತರಕಾರಿ, ಹಣ್ಣು, ಎಲೆಕ್ಟ್ರಿಕಲ್ ಶೋ ರೂಂ, ಮೊಬೈಲ್, ಬಟ್ಟೆ, ಬೇಕರಿ, ಜೂಸ್ ಪಾರ್ಲರ್, ಸೆಲೂನ್, ಬೂಟಿ ಪಾರ್ಲರ್ಗಳು, ಚಿನ್ನದ ಮಳಿಗೆಗಳು ಸೇರಿದಂತೆ ಎಲ್ಲಾ ಅಂಗಡಿಗಳು ಜುಲೈ ಅಂತ್ಯದವರೆಗೆ ಮಧ್ಯಾಹ್ನ ೨ ಗಂಟೆಯ ತನಕ ತೆರೆದಿರಲಿದೆ. ತುರ್ತು ಅಗತ್ಯತೆಯಾದ ಮೆಡಿಕಲ್, ಅಧಿಕೃತ ಹಾಲು ಮಾರಾಟ ಅಂಗಡಿ, ಎಲ್ಲ ಹೋಟೆಲ್‌ಗಳು ಎಂದಿನಂತೆ ತೆರೆಯಲಿದೆ ಎಂದು ವರ್ತಕರು ಈ ಮೊದಲು ತಿಳಿಸಿದ್ದರು.
ಬೆಳಗಿನ ಹೊತ್ತು ಹೆಚ್ಚಿದ ಜನದಟ್ಟಣೆ:
ಸೋಮವಾರದಿಂದ ಬೆಳಗಿನ ಹೊತ್ತು ಕುಂದಾಪುರ ಪೇಟೆಯಲ್ಲಿ ಜನ ದಟ್ಟಣೆ ಹೆಚ್ಚಿದ್ದು, ಅಂಗಡಿಗಳ ಮುಂಭಾಗದಲ್ಲಿ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ. ಜೊತೆಗೆ ನಗರ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಿದ್ದು, ವಾಹನ ನಿಲುಗಡೆಗೂ ಜಾಗವಿರದ ಪರಿಸ್ಥಿತಿ ಎದುರಾಗಿದೆ. ಮಧ್ಯಾಹ್ನದ ಹೊತ್ತಿಗೆ ಜನಸಂಚಾರ ವಿರಳವಾಗುತ್ತದೆ.
ಅಪಾಯವೇ ಹೆಚ್ಚು ಎನ್ನುತ್ತಾರೆ ವರ್ತಕರು:
ಕೊರೋನಾ ನಿಯಂತ್ರಣದ ಉದ್ದೇಶದಿಂದ ಬಂದ್ ಮಾಡಿ ಇದೀಗ ಮತ್ತಷ್ಟು ಅಪಾಯ ತಂದುಕೊಳ್ಳುವ ಸ್ಥಿತಿ ಎದುರಾಗಿದೆ. ಜಿಲ್ಲಾಡಳಿತವೇ ಬಂದ್‌ಗೆ ಬೆಂಬಲ ಸೂಚಿಸದಿರುವಾಗ ಏಕಪಕ್ಷೀಯವಾಗಿ ಕೈಗೊಂಡ ಈ ನಿರ್ಣಯ ಜನಸಾಮಾನ್ಯರಿಗೆ ಹಾಗೂ ಈಗಾಗಲೇ ಲಾಕ್‌ಡೌನ್‌ನಿಂದ ಸಂಕಷ್ಟದಲ್ಲಿರುವ ವರ್ತಕರಿಗೆ ಮತ್ತಷ್ಟು ಹೊರೆಯಾಗಲಿದೆ ಎಂದು ವರ್ತಕರೋರ್ವರು ತಮ್ಮ ಅಸಮಾಧಾನ ತೋರ್ಪಡಿಸಿದ್ದಾರೆ.
ಇದನ್ನೂ ಓದಿ:
► ಕುಂದಾಪುರ ಪುರಸಭಾ ವ್ಯಾಪ್ತಿಯಲ್ಲಿ ಜು.13ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಮಾತ್ರ ವ್ಯಾಪಾರ – https://kundapraa.com/?p=39476 .