Kundapra.com ಕುಂದಾಪ್ರ ಡಾಟ್ ಕಾಂ

ಶಾಲೆಗೆ ಬೀಗ ಜಡಿದು ಪ್ರತಿಭಟನೆ: ಪೊಲೀಸರಿಂದ ಪರಿಸ್ಥಿತಿ ತಿಳಿ

ಕುಂದಾಪುರ: ಪರವಾನಿಗೆ ಇಲ್ಲದೇ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಶಾಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿ ದೇವಲ್ಕುಂದ ಗ್ರಾಮದ ಕೆಲ ಹಿತಾಸಕ್ತಿಗಳು ಇಲ್ಲಿನ ವಿಜಯ ಮಕ್ಕಳ ಕೂಟ ಕಿರಿಯ ಪ್ರಾಥಮಿಕ ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ ಘಟನೆ ವರದಿಯಾಗಿದೆ.

50 ವರ್ಷಗಳ ಹಿಂದೆ ಸರಕಾರಿ ಜಾಗದಲ್ಲಿ ಸ್ಥಾಪಿಸಲ್ಪಟ್ಟಿದ್ದ ಶ್ರೀ ವಿಜಯಾ ಅನುದಾನಿತ ಶಾಲೆ 2011ರಲ್ಲಿ ಮಕ್ಕಳ ಕೊರತೆಯಿಂದಾಗಿ ಸಂಪೂರ್ಣ ಮುಚ್ಚಿಹೋಗಿತ್ತು. ಆದರೆ ಮತ್ತೆ ಗ್ರಾಮ ಸೇವಾ ಸಂಗಮ ರಿ. ಎಂಬ ಸಂಸ್ಥೆಯ ಮೂಲಕ ಶಾಲೆಯನ್ನು ಮತ್ತೆ ಆರಂಭಿಸಲಾಗಿತ್ತು. ಶಾಲೆಯಲ್ಲಿ ಒಟ್ಟು 223 ವಿದ್ಯಾರ್ಥಗಳು ಕಲಿಯುತ್ತಿದ್ದಾರೆ. ಮೂರು ವರ್ಷಗಳಿಂದ ಶಾಲೆಯಲ್ಲಿ 1-5ರ ವರೆಗೆ ಕನ್ನಡ ಹಾಗೂ ಇಂಗ್ಲೀಷ್ ಮಾಧ್ಯಮ ಶಿಕ್ಷಣವನ್ನು ನೀಡುತ್ತಾ ಬರಲಾಗುತ್ತಿದ್ದು, 6-7ನೇ ತರಗತಿಗೆ ಆರಂಭಿಸಲು ಪರವಾನಿಗೆ ಇಲ್ಲವೆಂಬುದನ್ನು ನೆಪವಾಗಿಸಿಕೊಂಡ ಕೆಲವರು, ಜಾಗದ ವಿಚಾರವನ್ನು ಮಂದಿಟ್ಟುಕೊಂಡು ಪ್ರತಿಭಟನೆಗಿಳಿದಿದ್ದರು.

ಶಾಲೆ ಪ್ರಾರಂಭಿಸಿದ ಸ್ಥಳ ಸರಕಾರಕ್ಕೆ ಸೇರಿದೆ, ಸುಳ್ಳು ದಾಖಲೆ ನೀಡಿ ನೋಂದಣಿ ಮಾಡಲಾಗಿದೆ ಎಂದು ಶಾಲೆ ಕಾರ್ಯದರ್ಶಿ ಚಂದ್ರಶೇಖರ ಶೆಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಡುಪಿ ಜಿಲ್ಲಾ ಉಪನಿರ್ದೇಶಕರಿಗೆ ದೂರು ನೀಡಿದ್ದರು. ಈ ಸಂಬಂಧ 3 ದಿನಗಳೊಳಗೆ ಲಿಖೀತ ಹೇಳಿಕೆ ನೀಡುವಂತೆ ಸಂಬಂಧಪಟ್ಟವರಿಗೆ ಡಿಡಿಪಿಐ ಅವರಿಂದ ಅಧಿಕೃತ ಜ್ಞಾಪನ ಪತ್ರ ನೀಡಲಾಗಿತ್ತು. ಶಾಲೆ ಆಡಳಿತ ಇದಕ್ಕೆ ಮರುತ್ತರ ನೀಡಿರಲಿಲ್ಲ. ಕೆಲ ಗ್ರಾಮಸ್ಥರು ಶಾಲೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದ್ದರಿಂದ ಶಾಲೆಗೆ ಭೇಟಿ ನೀಡಿದ ಉಪನಿರ್ದೇಶಕ ದಿವಾಕರ್ ಶಾಲೆಗೆ ದಾಖಲೆಗಳ ಬಗ್ಗೆ ಮಾಹಿತಿ ಪಡೆದಾಗ ಶಾಲೆಯಲ್ಲಿ 6 ಮತ್ತು 7 ತರಗತಿಯನ್ನು ನಡೆಸಲು ದಾಖಲೆ ಇಲ್ಲದಿರುವುದು ಬೆಳಕಿಗೆ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಶಾಲೆಯ ಮುಖ್ಯ ಶಿಕ್ಷಕಿ ದೀಪಿಕಾ ಸುಭಾಶ್ ಶಿಕ್ಷಣ ಇಲಾಖೆಗೆ ಅನುಮತಿ ನೀಡುವಂತೆ ಈಗಾಗಲೇ ಅರ್ಜಿ ಸಲ್ಲಿಸಿದ್ದೇವೆ. ಹೊಸದಾಗಿ ಮಕ್ಕಳನ್ನು ಸೇರಿಸಿಲ್ಲ, ತರಗತಿ ನಡೆಸುತ್ತಿಲ್ಲ ಎಂದು ದಾಖಲೆ ಸಹಿತ ವಿವರಿಸಿದರೂ ಕಿವಿಗೊಡದ ನಿರ್ದೇಶಕರು ಶಾಲೆಯಿಂದ ಹೊರನಡೆದರು.

ಪೋಷಕರಿಂದ ಅಧಿಕಾರಿಯ ದಿಗ್ಭಂದನ, ಪೊಲೀಸರಿಂದ ಬೀಗ ತೆರವು:
ಅನುಮತಿ ಇಲ್ಲದೇ ತರಗತಿ ನಡೆಸುತ್ತಿದ್ದೀರಿ ಎಂದು ಉಪನಿರ್ದೇಶಕ ದಿವಾಕರ್ ಶಾಲೆಯಿಂದ ಹೊರನಡೆಯುತ್ತಿದ್ದಾಗ ಅವರನ್ನು ಸುತ್ತುವರಿದು ಶಾಲೆಯ ಬೀಗ ತೆಗೆಯಲು ಅನುವು ಮಾಡಿಕೊಡಬೇಕೆಂದು ಕೋರಿಕೊಂಡರೂ ಅಧಿಕಾರಿ ಕಿವಿಗೊಡದೆ ಮುನ್ನಡೆದಾಗ ಪೊಷಕರು ಶಾಲೆಯ ಗೇಟು ಹಾಕಿ ಪ್ರತಿಭಟಿಸಿದರು. ಈ ಬಗ್ಗೆ ಅಧಿಕಾರಿ ಕುಂದಾಪುರದ ಪೊಲೀಸರಿಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಕುಂದಾಪುರದ ವೃತ್ತ ನಿರೀಕ್ಷಕ ದಿವಾಕರ ಪಿ. ಎಂ ಅವರ ಸಮ್ಮಖದಲ್ಲಿ ಉಪನಿರ್ದೇಶಕರು ಶಾಲಾ ಮುಖ್ಯ ಶಿಕ್ಷಕಿ ಹಾಗೂ ಶಾಲೆಯ ಕಾರ್ಯದರ್ಶಿಯೊಂದಿಗೆ ಚರ್ಚಿಸಿ ಜಾಗದ ಸಮಸ್ಯೆಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಕ್ರಮ ಕೈಗೊಳ್ಳಲಾಗುವುದು. ಅಲ್ಲಿಯವರೆಗೆ ಮಕ್ಕಳ ಶಿಕ್ಷಣಕ್ಕೆ ತೊಂದರೆ ನೀಡದೇ ಸಮಸ್ಯೆ ಬಗೆಹರಿಯುವ ತನಕ ತರಗತಿ ನಡೆಸಲು ಅನುವು ಮಾಡಿಕೊಡಬೇಕೆಂದು ಕೇಳಿಕೊಂಡರು. ಬಳಿಕ ಶಾಲೆಯ ಬೀಗವನ್ನು ತೆರವುಗೊಳಿಸಲಾಯಿತು.

Exit mobile version