Kundapra.com ಕುಂದಾಪ್ರ ಡಾಟ್ ಕಾಂ

ಉಡುಪಿ ಜಿಲ್ಲೆಯ ಕೋವಿಡ್ ಅಪ್ಡೇಟ್: ಗುರುವಾರ 109 ಪಾಸಿಟಿವ್ ದೃಢ, ಓರ್ವ ಮೃತ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಉಡುಪಿ: ಜಿಲ್ಲೆಯಲ್ಲಿ ಜು.16ರ ಗುರುವಾರ 109 ಹೊಸ ಕೊರೋನಾ ಪಾಸಿಟಿವ್ ಪ್ರಕರಣ ವರದಿಯಾಗಿದೆ. ಈ ಪೈಕಿ ಕುಂದಾಪುರ ತಾಲೂಕಿನ 62, ಉಡುಪಿ ತಾಲೂಕಿನ 36 ಹಾಗೂ ಕಾರ್ಕಳ ತಾಲೂಕಿನ 11 ಮಂದಿಗೆ ಪಾಸಿಟಿವ್ ಬಂದಿದೆ.

ಒಟ್ಟು ಪ್ರಕರಣಗಳಲ್ಲಿ 61 ಪುರುಷರು, 40 ಮಹಿಳೆಯರು, 8 ಮಕ್ಕಳು ಸೇರಿದ್ದಾರೆ. ಇಂದು 80 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.

ಮರವಂತೆಯ 54 ವರ್ಷದ ವ್ಯಕ್ತಿ ಇಂದು ಮೃತಪಟ್ಟಿದ್ದು ಅವರಿಗೆ ಕೊರೋನಾ‌ ಪಾಸಿಟಿವ್ ಇರುವುದು ದೃಢವಾಗಿದೆ. ಮೃತ ವ್ಯಕ್ತಿ ಅಸ್ತಮಾದಿಂದ ಬಳಲುತ್ತಿದ್ದು ಬುಧವಾರ ಸಂಜೆ ಅವರನ್ನು ಕುಂದಾಪುರ ಖಾಸಗಿ ಆಸ್ಪತ್ರೆಗೆ ಕರೆತರಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸಗೆ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮದ್ಯೆ ಅವರು ಮೃತಪಟ್ಟಿದ್ದರು. ಮೃತದೇಹವನ್ನು ಕುಂದಾಪುರಕ್ಕೆ ತಂದು ಸರಕಾರಿ ಆಸ್ಪತ್ರೆಯಲ್ಲಿ ಗಂಟಲು ದ್ರವ ಪರೀಕ್ಷೆ ನಡೆಸಲಾಗಿತ್ತು. ಕೊರೋನಾ ರ‍್ಯಾಪಿಡ್ ಟೆಸ್ಟ್ ವರದಿಯಲ್ಲಿ ಕೊರೋನಾ ಪಾಸಿಟಿವ್ ಇರುವುದು ತಿಳಿದುಬಂದಿದೆ.

ಅಜ್ಜರಕಾಡಿನಲ್ಲಿರುವ ಜಿಲ್ಲಾಸ್ಪತ್ರೆ ಇಬ್ಬರು ವೈದ್ಯರು, ಓರ್ವ ನರ್ಸ್ ಹಾಗೂ ಇತರ ಇಬ್ಬರು ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಯನ್ನು ಮೂರು ದಿನಗಳ ಕಾಲ ಸೀಲ್‌ಡೌನ್ ಮಾಲಾಗಿದೆ. ತುರ್ತು ಚಿಕಿತ್ಸೆ ಹೊರತುಪಡಿಸಿ ಸಾಮಾನ್ಯ ರೋಗಿಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಸದ್ಯ ಮೂರು ದಿನಗಳ ಕಾಲ ಬಂದ್ ಮಾಡಿ, ಇಡೀ ಆಸ್ಪತ್ರೆಯನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗುತ್ತದೆ.

ಬೈಂದೂರು ಪೊಲೀಸ್ ಠಾಣೆಯ ಎ.ಎಸ್.ಐ, ಮಹಿಳಾ ಪೊಲೀಸ್ ಸಿಬ್ಬಂದಿ ಹಾಗೂ ಹೋಂಗಾರ್ಡ್ ಓರ್ವರಿಗೂ ಪಾಸಿಟಿವ್ ಬಂದಿದ್ದು, ಠಾಣೆಯನ್ನು ಸೀಲ್ ಡೌನ್ ಮಾಡಲಾಗಿದೆ. ಕುಂದಾಪ್ರ ಡಾಟ್ ಕಾಂ ಸುದ್ದಿ.

489 ನೆಗೆಟಿವ್:
ಈ ತನಕ ಒಟ್ಟು 23,645 ಮಾದರಿ ಸಂಗ್ರಹಿಸಿದ್ದು, ಅವುಗಳಲ್ಲಿ 21,156 ನೆಗೆಟಿವ್, 1,895 ಪಾಸಿಟಿವ್ ಬಂದಿದ್ದು, 594 ಮಂದಿಯ ವರದಿ ಬರುವುದು ಬಾಕಿ ಇದೆ. ಇಂದು ಬಂದಿರುವ ವರದಿಯಲ್ಲಿ 489 ನೆಗೆಟಿವ್, 109 ಪಾಸಿಟಿವ್ ಬಂದಿದೆ. ಒಟ್ಟು 1,929 ಮಂದಿ ಹೋಮ್ ಕ್ವಾರಂಟೈನಿನಲ್ಲಿದ್ದಾರೆ.

428 ಸಕ್ರಿಯ ಪ್ರಕರಣ:
ಜಿಲ್ಲೆಯಲ್ಲಿ ಒಟ್ಟು 1,895 ಕೊರೋನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಆ ಪೈಕಿ 1,462 ಮಂದಿ ಬಿಡುಗಡೆಯಾಗಿದ್ದು, 428 ಮಂದಿ ಕೊರೋನಾ ಸೋಂಕಿತರಿಗೆ ಉಡುಪಿ, ಕುಂದಾಪುರ, ಕಾರ್ಕಳದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈವರೆಗೆ ಕೊರೋನಾ ಪಾಸಿಟಿವ್ ಇದ್ದ 5 ಮಂದಿ ಮೃತಪಟ್ಟಿದ್ದಾರೆ/ಕುಂದಾಪ್ರ ಡಾಟ್ ಕಾಂ ಸುದ್ದಿ/

ಇನ್ನಷ್ಟು ಮಾಹಿತಿಗೆ ಕೆಲವು ಸಮಯದ ನಂತರ ಇದೇ ಲಿಂಕ್ ನೋಡಿ

Exit mobile version