Kundapra.com ಕುಂದಾಪ್ರ ಡಾಟ್ ಕಾಂ

ಮರಳು ಮಾಫಿಯಾ ತಡೆಗೆ ಆಗ್ರಹಿಸಿ ಪ್ರತಿಭಟನೆ

ಕುಂದಾಪುರ: ಹೊರಜಿಲ್ಲೆಗಳಿಗೆ ಮಾಡುತ್ತಿರುವ ಮರಳು ಸಾಗಾಟವನ್ನು ನಿಷೇಧಿಸಬೇಕು ಹಾಗೂ ಮರಳಿಗೆ ಸರಕಾರವೇ ದರ ನಿಗದಿ ಮಾಡಬೇಕು ಎಂದು ಆಗ್ರಹಿಸಿ ತಾಲೂಕು ರೈತ ಸಂಘದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕುಂದಾಪುರದಲ್ಲಿ ಪ್ರತಿಭಟನೆ ನಡೆಸಿ ಕುಂದಾಪುರದ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಕುಂದಾಪುರ ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ ತಾಲೂಕಿನಲ್ಲಿ ಸಾಂಪ್ರದಾಯಿಕ ಮರಳುಗಾರಿಕೆ ನಡೆಯುತ್ತಿದ್ದ ವೇಳೆ ಇಲ್ಲಿನ ಜನರಿಗೆ ಹೇರಳವಾಗಿ ಮರಳು ದೊರೆಯುತ್ತಿತ್ತು. ಆದರೆ ಇತ್ತಿಚಿನ ದಿನಗಳಲ್ಲಿ ಇಲ್ಲಿನವರಿಗಿಂತ ಹೆಚ್ಚಾಗಿ ಮರಳು ಹೊರ ಜಿಲ್ಲೆಗಳಿಗೆ ಸಾಗಾಟವಾಗುತ್ತಿದೆ. ಹಾಗಾಗಿ ಮರಳಿನ ಬೆಲೆಯೂ ಗಗನಕ್ಕೇರಿದೆ. ಇದರಿಂದಾಗಿ ಕಟ್ಟಡ ಮಾಲಕರು , ರೈತರು ಹಾಗೂ ಸಾರ್ವಜನಿಕರಿಗೆ ಮರಳಿನ ಅಭಾವ ಉಂಟಾಗಿ ದುಪ್ಪಟ್ಟು ಹಣವನ್ನು ನೀಡಿ ಮರಳು ಖರೀದಿಸಬೇಕಾದ ಸ್ಥಿತಿ ಇದೆ. ಹೊರ ಜಿಲ್ಲೆಗಳಿಗೆ ಹೋಗುವ ಮರಳನ್ನು ನಿಷೇಧಿಸಿ ಇಲ್ಲಿನವರಿಗೇ ಮರಳು ದೊರೆಯುವಂತೆ ಮಾಡಬೇಕು ಎಂದವರು ಆಗ್ರಹಿಸಿದರು.

ಕುಂದಾಪುರ ಶಾಸ್ತ್ರಿ ಸರ್ಕಲ್‌ನಿಂದ ಮಿನಿ ವಿಧಾನಸೌಧದ ತನಕ ಕಾಲ್ನಡಿಗೆಯಲ್ಲಿ ಸಾಗಿ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಅವರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಲಾರಿ ಮಾಲಕರ ಸಂಘದ ಅಧ್ಯಕ್ಷ ದಿವಾಕರ್ ಶೆಟ್ಟಿ, ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಗಣೇಶ್ ತೊಂಡೆಮಕ್ಕಿ, ಪಂಚಾಯತ್‌ರಾಜ್ ಒಕ್ಕೂಟದ ಉದಯಕುಮಾರ್ ಶೆಟ್ಟಿ, ಇಂಜಿನಿಯರ್ಸ್ ಅಸೋಸಿಯೇಶನ್‌ನ ಜನಾರ್ಧನ ಖಾರ್ವಿ. ಎಲ್ಲಾ ಗುತ್ತಿಗೆದಾರರು, ಕೂಲಿ ಕಾರ್ಮಿಕರು, ರೈತರು ಜೊತೆಗಿದ್ದರು.

Exit mobile version