Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಮನೆ ಕುಸಿದು ಲಕ್ಷಾಂತರ ರೂ. ಹಾನಿ. ಕುಟುಂಬಿಕರು ಪಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಗಂಗೊಳ್ಳಿ: ಇಲ್ಲಿನ ಮೇಲ್‌ಗಂಗೊಳ್ಳಿ ರಾಮ ಪೈ ಮಠದ ಬಳಿಯ ನಿವಾಸಿ ಮುಕುಂದ ನಾಯಕ್ ಎಂಬುವರ ವಾಸ್ತವ್ಯದ ಮನೆ ಭಾರೀ ಮಳೆಗೆ ಗುರುವಾರ ರಾತ್ರಿ ಸಂಪೂರ್ಣವಾಗಿ ಧರೆಶಾಯಿಯಾಗಿದೆ. ಮನೆಯಲ್ಲಿದ್ದ ಬೆಲೆ ಬಾಳುವ ವಸ್ತುಗಳು, ಪೀಠೋಪಕರಣ ಸಹಿತ ಇನ್ನಿತರ ವಸ್ತುಗಳು ಮನೆಯ ಅವಶೇಷಗಳ ಅಡಿ ಸಿಲುಕಿ ಹಾನಿಗೊಳಗಾಗಿದೆ.

ರಾತ್ರಿ ಸುಮಾರು 9 ಗಂಟೆ ಸುಮಾರಿಗೆ ಮನೆಯ ಮೇಲ್ಛಾವಣಿ ಮುರಿದು ಬೀಳುತ್ತಿರುವ ಸದ್ದು ಕೇಳುತ್ತಿದ್ದಂತೆಯೇ ಮನೆಯಲ್ಲಿದ್ದ ಮುಕುಂದ ನಾಯಕ್, ಅವರ ತಾಯಿ, ತಂಗಿ ಮತ್ತು ತಮ್ಮ ಮನೆಯಿಂದ ಹೊರಕ್ಕೆ ಓಡಿ ಬಂದಿದ್ದರಿಂದ ಮನೆಯಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮನೆಯ ಗೋಡೆಗಳು ಹಾಗೂ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದು ಬಿದ್ದಿದೆ.

ಘಟನಾ ಸ್ಥಳಕ್ಕೆ ಗಂಗೊಳ್ಳಿ ಗ್ರಾಮಕರಣಿಕ ರಾಘವೇಂದ್ರ ದೇವಾಡಿಗ, ಗಂಗೊಳ್ಳಿ ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ಬಿ.ರಾಘವೇಂದ್ರ ಪೈ ಹಾಗೂ ಬಿ.ಗಣೇಶ ಶೆಣೈ ಮತ್ತಿತರರು ಭೇಟಿ ನೀಡಿ ಹಾನಿಯನ್ನು ಪರಿಶೀಲಿಸಿದ್ದಾರೆ. ಬೈಂದೂರು ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಅವರು ಕುಂದಾಪುರ ತಹಶೀಲ್ದಾರ್ ಅವರಿಗೆ ಕರೆ ಮಾಡಿ ಹಾನಿ ಬಗ್ಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿರುವ ಅವರು ಸರಕಾರದಿಂದ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.

ಅತಂತ್ರವಾದ ಬಡ ಕುಟುಂಬ: ಕಷ್ಟದಲ್ಲಿ ಜೀವನ ನಡೆಸುತ್ತಿರುವ ಈ ಕುಟುಂಬ ಮನೆ ಕುಸಿದು ಬಿದ್ದಿರುವುದರಿಂದ ಬೀದಿ ಪಾಲಾಗಿದೆ. ಸೇಲ್ಸ್‌ಮೆನ್ ವೃತ್ತಿ ನಡೆಸುತ್ತಿರುವ ಮುಕುಂದ್ ನಾಯಕ್ ಈ ಕುಟುಂಬದ ಆಧಾರ ಸ್ತಂಭ. ಇವರ ತಂಗಿ ವಿದ್ಯಾಭ್ಯಾಸ ನಡೆಸುತ್ತಿದ್ದು, ಇವರ ತಮ್ಮ ವಿಕಲಚೇತನ. ತಾಯಿ ಮನೆಯಲ್ಲೇ ಇದ್ದು ಮನೆಕೆಲಸ ನೋಡಿಕೊಳ್ಳುತ್ತಿದ್ದಾರೆ. ಒಬ್ಬರ ಸಂಬಳದಲ್ಲಿ ಇಡೀ ಕುಟುಂಬ ಜೀವನ ಸಾಗುತ್ತಿದ್ದು, ಗುರುವಾರ ರಾತ್ರಿ ವಾಸ್ತವ್ಯದ ಮನೆ ಕುಸಿದು ಬಿದ್ದಿರುವುದು ಈ ಬಡ ಕುಟುಂಬವನ್ನು ಕಂಗಾಲಾಗಿಸಿದೆ.

Exit mobile version