Kundapra.com ಕುಂದಾಪ್ರ ಡಾಟ್ ಕಾಂ

ಗಂಗೊಳ್ಳಿ: ಕಾಲೇಜು ಆವರಣದಲ್ಲಿ ಎದ್ದಿತು ನೀರಿನ ಬುಗ್ಗೆ!

ಗಂಗೊಳ್ಳಿ: ಇಲ್ಲಿನ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ನಿಂತ ಮಳೆಯ ನೀರಿನ ಮಧ್ಯದಿಂದ ನೀರು ಚಿಮ್ಮುವ ದೃಶ್ಯ ಸಾರ್ವಜನಿಕರ ಗಮನ ಸೆಳೆಯಿತು. ರಭಸವಾಗಿ ನೀರು ಚಿಮ್ಮುತ್ತಿದ್ದರಿಂದ ಕೈ ಅಥವಾ ಕಾಲನ್ನು ಇಟ್ಟಾಗ ದೂಡಿದ ಅನುಭವವಾಗುತ್ತಿತ್ತು. ಇದನ್ನು ಕಂಡ ಕೆಲವರು ಭೂಮಿಯಿಂದ ನೀರು ಚಿಮ್ಮುತ್ತಿದೆ ಎಂದು ಹೇಳುತ್ತಿದ್ದರೆ, ಇನ್ನೂ ಕೆಲವರು ನೀರು ಭೂಮಿಯಲ್ಲಿ ಇಂಗುತ್ತಿದ್ದು, ಇದರಿಂದ ಈ ರೀತಿಯ ನೀರಿನ ಗುಳ್ಳೆಗಳು ಎಳುತ್ತಿದೆ ಎಂದು ಆಡಿಕೊಳ್ಳುತ್ತಿದ್ದರು.

ಕಾಲೇಜಿನ ಕ್ರೀಡಾಂಗಣವು ಮರಳು ಮಿಶ್ರಿತವಾಗಿರುವುದರಿಂದ ಮಳೆಯ ನೀರು ಶೇಖರಣೆಗೊಂಡು ಭೂಮಿಯಲ್ಲಿ ಇಂಗುವಾಗ ಭೂಮಿಯ ಅಡಿಯಲ್ಲಿರುವ ಗಾಳಿಯು ಹೊರಗೆ ಬರುವ ಸಂದರ್ಭ ಈ ರೀತಿಯ ವಾತಾವರಣ ಸೃಷ್ಟಿಯಾಗಿರಬಹುದು ಎಂದು ಶಾಲೆಯ ಪ್ರಾಂಶುಪಾಲ ಆರ್.ಎನ್.ರೇವಣಕರ್ ಅಭಿಪ್ರಾಯಪಟ್ಟಿದ್ದಾರೆ.

ಇದು ವುಜರೆ ಎಳುವುದು ಎಂದಿರುವ ಸ್ಥಳೀಯರು, ಮಳೆ ಹೆಚ್ಚಾದಾಗ ಮೆದು ನೆಲದಲ್ಲಿ ಕೆಲವೊಂದು ಬಾರಿ ಈ ರೀತಿಯಾಗಿ ನೀರಿನ ಚಿಮ್ಮುವುದು ಕಂಡು ಬರುತ್ತದೆ.  ಹೊಲಗದ್ದೆ ಮತ್ತು ಮೆದು ನೆಲದಲ್ಲಿ ಮಳೆಗಾಲದಲ್ಲಿ ಇದು ಸಾಮಾನ್ಯವಾಗಿ ಕಂಡು ಬರುತ್ತದೆ ಎಂದಿದ್ದಾರೆ. ಒಟ್ಟಿನಲ್ಲಿ ಅಪರೂಪಕ್ಕೆ ಸಂಜೆಯ ತನಕವೂ ಕ್ರೀಡಾಂಗಣದ ತುಂಬೆಲ್ಲಾ ನೀರು ಚಿಮ್ಮುವುದನ್ನು ಕಂಡು ಜನರು ಚಿಕಿತರಾಗಿದ್ದರು.

ಚಿತ್ರ : ವೆಲ್‌ಕಮ್ ಗಂಗೊಳ್ಳಿ 

Exit mobile version