ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಒಂದು ಪ್ರದೇಶದ ಅಭಿವೃದ್ಧಿ ಆಗಬೇಕಾದರೆ ಅಲ್ಲಿ ಉತ್ತಮ ಸಂಪರ್ಕ, ಸಾರಿಗೆ ಸೌಲಭ್ಯ ಇರಬೇಕು. ಇದನ್ನು ಗಮನದಲ್ಲಿ ಇರಿಸಿಕೊಂಡು ಗ್ರಾಮೀಣ ಪ್ರದೇಶಗಳಿಂದ ಕೂಡಿರುವ ಬೈಂದೂರು ವಿಧಾನಸಭಾ ಕ್ಷೇತ್ರದಲ್ಲಿ ಗುಣಮಟ್ಟದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಶಾಶಕ ಬಿ. ಎಂ. ಸುಕುಮಾರ ಶೆಟ್ಟಿ ಹೇಳಿದರು.
ಹೇರೂರು ಗ್ರಾಮದ ನಾಲ್ಕು ರಸ್ತೆಯಿಂದ ಕಾಲ್ತೋಡು ಗ್ರಾಮದ ಜೋಡುಗುಪ್ಪೆ ವರೆಗಿನ ರಸ್ತೆಯನ್ನು ಡಾಂಬರೀಕರಣದ ಮೂಲಕ ಅಭಿವೃದ್ಧಿಪಡಿಸುವ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ದೇವಾಲಯದ ಅರ್ಚಕ ಎಂ. ಕೃಷ್ಣ ಭಟ್ ಕಾಮಗಾರಿಯ ಭೂಮಿಪೂಜೆ ನೆರವೇರಿಸಿದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ನಮ್ಮ ಗ್ರಾಮ ನಮ್ಮ ರಸ್ತೆ ಅಡಿಯಲ್ಲಿ ೫ ಕಿಮೀ ಉದ್ದದ ಈ ರಸ್ತೆಯನ್ನು ರೂ ೧.೬೩ ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ. ಇದರಿಂದ ಹೇರೂರು ಗ್ರಾಮದ ಹಲವು ಜನವಸತಿ ಪ್ರದೇಶಗಳಿಗೆ ಮತ್ತು ಹೇರೂರಿನಿಂದ ಕಾಲ್ತೋಡಿಗೆ ಸರ್ವಋತು ಸಂಪರ್ಕ ಸೌಲಭ್ಯ ಲಭಿಸುತ್ತದೆ ಎಂದು ಅವರು ಹೇಳಿದರು.
ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕ್‌ಕುಮಾರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅಭಿವೃದ್ದಿ ಅಧಿಕಾರಿ ಪ್ರಕಾಶ್ ವಂದಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಿಯದರ್ಶಿನಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯರಾದ ಶ್ರೀನಿವಾಸ ಪೂಜಾರಿ, ಕಿಶೊರ ಶೆಟ್ಟಿ, ಗುತ್ತಿಗೆದಾರ ಸೂರ್ಯಣ್ಣ ಶೆಟ್ಟಿ, ಹೇರೂರು ಮತ್ತು ಕಾಲ್ತೋಡು ಗ್ರಾಮಸ್ಥರು ಇದ್ದರು.