Kundapra.com ಕುಂದಾಪ್ರ ಡಾಟ್ ಕಾಂ

ಬಕ್ರೀದ್ ಶಾಂತಿಯುತವಾಗಿ ಆಚರಿಸಿ, ಕಾನೂನು ಕೈಗೆತ್ತಿಕೊಂಡರೆ ಕಠಿಣ ಕ್ರಮ: ಜಿಲ್ಲಾಧಿಕಾರಿ ಜಿ. ಜಗದೀಶ್

ಕುಂದಾಪ್ರ ಡಾಟ್ ಕಾಂ ಸುದ್ದಿ
ಉಡುಪಿ: ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘನೆ ಮಾಡಿ ಪ್ರಾಣಿಗಳನ್ನು ಸಾಗಾಣಿಕೆ ಮಾಡುತ್ತಿದ್ದಲ್ಲಿ ಸಾರ್ವಜನಿಕರು ತಾವೇ ಕಾನೂನನ್ನು ಕೈಗೊತ್ತಿಕೊಳ್ಳುವಂತಿಲ್ಲ , ಈ ಬಗ್ಗೆ ಸಂಬಂಧಿಸಿದ ಹತ್ತಿರದ ಪೊಲೀಸ್ ಠಾಣೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಅಥವಾ 100 ಕರೆ ಮಾಡಿ ತಿಳಿಸಬೇಕು, ಸಾರ್ವಜನಿಕರು ತಾವೇ ಕಾನೂನನ್ನು ಕೈಗೆತ್ತಿಕೊಂಡರೆ ಅಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಅವರು ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಅಕ್ರಮವಾಗಿ ಪ್ರಾಣಿಗಳ ಅನಧಿಕೃತ ಸಾಗಾಣಿಕೆ ಹಾಗೂ ವಧೆ ತಡೆಗಟ್ಟುವ ಕುರಿತು ಜಿಲ್ಲೆಯಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ನಡೆದ ಸಭೆಯಲ್ಲಿ ಹೇಳಿದರು.

ಅಧಿಕೃತ ಜಾನುವಾರು ಸಾಗಾಣಿಕೆ ಮಾಡುವವರು, ಪಶು ಸಂಗೋಪಣಾ ಇಲಾಖೆ ನಿಗಧಿಪಡಿಸಿದ ನಮೂನೆಯಲ್ಲಿ ಸ್ಥಳೀಯ ಸಂಸ್ಥೆಗಳ ಮತ್ತು ಸದ್ರಿ ವ್ಯಾಪ್ತಿಯ ಪೊಲೀಸ್ ಠಾಣೆಗಳ ಅನುಮತಿ ಪಡೆಯಬೇಕು, ಅನಧಿಕೃತ ಜಾನುವಾರು ಸಾಗಾಣಿಕೆಯಲ್ಲಿ ವಶಪಡಿಸಿಕೊಂಡ ಜಾನುವಾರುಗಳನ್ನು ಸಂರಕ್ಷಿಸಲು ಹತ್ತಿರದ ಗೋಶಾಲೆಗೆ ಗುರುತಿಸುವಂತೆ ಪೊಲೀಸ್ ಇಲಾಖೆಗೆ ಜಿಲ್ಲಾಧಿಕಾರಿ ಸೂಚಿಸಿದರು.

ಎಲ್ಲಾ ತಾಲೂಕಿನ ತಹಶೀಲ್ದಾರರು ಅಗತ್ಯ ವಿದ್ದಲ್ಲಿ ಶಾಂತಿ ಸಭೆಗಳನ್ನು ನಡೆಸಿ, ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ಸೂಕ್ತ ಕ್ರಮಗಳನ್ನು ಕೈಗೊಂಡು ಮೇಲುಸ್ತುವಾರಿ ವಹಿಸುವಂತೆ ತಿಳಿಸಿದರು.

ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್ ಮಾತನಾಡಿ , ಜಿಲ್ಲೆಯಾದ್ಯಂತ ರಾತ್ರಿ ತಪಾಸಣಾ ಕೇಂದ್ರ, ಹಾಗೂ ದಿನದ ಸಮಯದಲ್ಲಿ ತಪಾಸಣಾ ಕೇಂದ್ರಗಳಿದ್ದು, ಕೇಂದ್ರಗಳಿಗೆ ಹೆಚ್ಚಿನ ಜಾಗರೂಕತೆಯಿಂದ ಇರುವಂತೆ ಸೂಚನೆ ನೀಡಲಾಗಿದೆ. ಸಬ್ ಡಿವಿಜನ್ ಮಟ್ಟದಲ್ಲಿ ಪಿ.ಎಸ್.ಐ ಒಳಗೊಂಡ ವಿಶೇಷ ತಪಸಣಾ ತಂಡವು ಈ ಬಗ್ಗೆ ನಿಗವಹಿಸಲಿದೆ. ಸಿ.ಆರ್.ಪಿ.ಸಿ ಸೆಕ್ಷನ್ 107 ರೀತ್ಯಾ ಮುನ್ನೆಚ್ಚರಿಕೆ ಕ್ರಮವಾಗಿ ಪ್ರತಿಬಂಧಕ ಕೇಸ್ ಗಳನ್ನು ದಾಖಲಿಸಲಾಗಿದೆ. ಹಳೆಯ ಆರೋಪಿಗಳನ್ನು ಈಗಾಗಲೇ ಠಾಣೆಗೆ ಕರೆಸಿ ಎಚ್ಚರಿಕೆ ನೀಡಿದ್ದು, ಅಂತವರ ಮೇಲೆ ನಿಗಾವಹಿಸಲಾಗಿದೆ. ಠಾಣಾ ವ್ಯಾಪ್ತಿಯಲ್ಲಿ ಧಾರ್ಮಿಕ ಮುಖಂಡರೊಡನೆ ಸ್ನೇಹ ಸೌಹಾರ್ದ ಸಭೆಗಳನ್ನು ಮಾಡುವಂತೆ ಎಲ್ಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದರು.

ಎಲ್ಲಾ ನಿರ್ದೇಶನಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಿ, ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಶಾಂತಿಯುತವಾಗಿ ಬಕ್ರೀದ್ ಹಬ್ಬವನ್ನು ಆಚರಿಸುವ ನಿಟ್ಟಿನಲ್ಲಿ ಎಲ್ಲಾ ನಗರ ಸ್ಥಳೀಯ ಸಂಸ್ಥೆ ಮತ್ತು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿಯೂ ಅಗತ್ಯ ಮುಂಜಾಗೃತ ಕ್ರಮಗಳನ್ನು ವಹಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

ಸಭೆಯಲ್ಲಿ ಎಎಸ್ಪಿ ಕುಮಾರ ಚಂದ್ರ, ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫೆಡ್ನೇಕರ್ ಹಾಗೂ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

 

Exit mobile version