Kundapra.com ಕುಂದಾಪ್ರ ಡಾಟ್ ಕಾಂ

ಸತತ ಮಳೆಗೆ ಕುಂದಾಪುರ ಹೆದ್ದಾರಿಯಲ್ಲಿ ಕೃತಕ ನೆರೆ: ಸಚಿವರ ಕಾರು ತಡೆದು ಸ್ಥಳೀಯರ ಆಕ್ರೋಶ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರ ನಗರ ಭಾಗದ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಅವ್ಯವಸ್ಥೆಯ ಆಗರವಾಗಿದ್ದು ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಬಸ್ರೂರು ಮೂರುಕೈನಿಂದ ವಿನಾಯಕ ಟಾಕೀಸ್ ತನಕ ಕೃತಕ ನೆರೆ ಸೃಷ್ಟಿಯಾಗಿದ್ದಲ್ಲದೇ, ಕಿಲೋ ಮೀಟರ್ ಉದ್ದಕ್ಕೂ ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ತೊಂದರೆ ಅನುಭವಿಸುವಂತಾಯಿತು.

ಈ ಭಾಗದಲ್ಲಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಮಾಡಿಕೊಡದಿರುವುದರಿಂದ ಮಳೆಗಾಲ ಆರಂಭವಾದಾಗಲಿಂದಲೂ ಕೃತಕ ನೆರೆ ಸೃಷ್ಟಿಯಗಿದ್ದು, ವಾಹನ ಸವಾರರು ನಿತ್ಯ ಯಾತನೆ ಅನುಭವಿಸುವಂತಾಗಿತ್ತು. ಬೆಳಿಗ್ಗೆಯಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಯಿಂದಾಗಿ ಸಂಚಾರ ಕಷ್ಟಸಾಧ್ಯವಾಗಿ ಕಿಲೋಮೀಟರ್ ಉದ್ದಕ್ಕೂ ಜಾಮ್ ಉಂಟಾಗಿತ್ತು. ಇದೇ ವೇಳೆಯಲ್ಲಿ ಕುಂದಾಪುರದಲ್ಲಿ ಕಾರ್ಯಕ್ರಮ ಮುಗಿಸಿ ಹಿಂದಿರುಗುತ್ತಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರ ಕಾರನ್ನು ತಡೆದ ಸಾರ್ವಜನಿಕರು, ಅವ್ಯವಸ್ಥೆಯ ಬಗ್ಗೆ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಸಚಿವರು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿ ತೆರಳಿದ್ದು, ಸಂಜೆಯ ವೇಳೆಗೆ ತಾತ್ಕಾಲಿಕವಾಗಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿಕೊಡಲಾಗಿದೆ.

ಈ ಸಂದರ್ಭ ರಾಷ್ಟ್ರೀಯ ಹೆದ್ದಾರಿ ಹೋರಾಟ ಸಮಿತಿಯ ಕಿಶೋರ್ ಕುಮಾರ್ ಕುಂದಾಪುರ, ಶಿರಿಯಾರ ಗೋಪಾಲಕೃಷ್ಣ ಶೆಟ್ಟಿ, ರಾಜೇಶ್ ಕಾವೇರಿ, ಶಶಿಧರ ಹೆಮ್ಮಾಡಿ, ಗಣೇಶ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.

  

Exit mobile version