Kundapra.com ಕುಂದಾಪ್ರ ಡಾಟ್ ಕಾಂ

ಉಪ್ಪುಂದದ ಸುರಭಿ ಎಸ್. ಶೆಟ್ಟಿ ರಾಜ್ಯಕ್ಕೆ ದ್ವಿತೀಯ. 625ರಲ್ಲಿ 624 ಅಂಕ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಸಂದೀಪನ್ ಆಂಗ್ಲ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಸುರಭಿ ಎಸ್. ಶೆಟ್ಟಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 625ರಲ್ಲಿ 624 ಅಂಕ ಪಡೆದು ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾಳೆ. ಎಲ್‌ಕೆಜಿಯಿಂದ ಅದೇ ಶಾಲೆಯಲ್ಲಿ ಅಧ್ಯಯನ ನಡೆಸಿರುವ ಸುರಭಿ ಖಂಬದಕೋಣೆ ಗ್ರಾಮದ ಹಳಗೇರಿ ಮೂಲದ ಎಚ್. ಸುರೇಶ ಶೆಟ್ಟಿ – ಸೀಮಾ ಎಸ್. ಶೆಟ್ಟಿ ಅವರ ಪ್ರಥಮ ಪುತ್ರಿ. ಸುರೇಶ ಶೆಟ್ಟಿ ಉಪ್ಪುಂದದಲ್ಲಿ ಪೀಠೋಪಕರಣ ಮಳಿಗೆ ನಡೆಸುತ್ತಿದ್ದಾರೆ.

ಸುರಭಿ ಕನ್ನಡದಲ್ಲಿ 125, ಇಂಗ್ಲೀಷ್ 100, ಹಿಂದಿ – 100, ಗಣಿತ – 100, ವಿಜ್ಞಾನ – 100 ಹಾಗೂ ಸಮಾಜ ವಿಜ್ಞಾನದಲ್ಲಿ – 99 ಅಂಕ ಗಳಿಸಿದ್ದಾಳೆ. ಮುಂದೆ ವಿಜ್ಞಾನ ಓದಿ ವೈದ್ಯಳಾಗಬೇಕೆಂದಿದ್ದಾಳೆ. ಸುರಭಿಯ ಸಹೋದರಿ ಸುವಿಧಾ ಅದೇ ಶಾಲೆಯಲ್ಲಿ ಈ ವರ್ಷ ಎಸ್‌ಎಸ್‌ಎಲ್‌ಸಿ ಅಧ್ಯಯನ ನಿರತಳು.

’ಶಾಲೆಯಲ್ಲಿ ನಿಗದಿಗೊಳಿಸಿದ್ದ ಒಂದು ಗಂಟೆಯ ಓದಿನ ಅವಧಿಯ ಜತೆಗೆ ಮನೆಯಲ್ಲಿ ಪ್ರತಿದಿನ ಕನಿಷ್ಠ ನಾಲ್ಕು ಗಂಟೆ ಓದುತ್ತಿದ್ದೆ. ಆಯಾ ದಿನದ ಪಾಠಗಳನ್ನು ಅಂದೇ ಮನನ ಮಾಡುತ್ತಿದ್ದೆ. ಕ್ಲಿಷ್ಟ ಮತ್ತು ಸಂದೇಹ ಇರುವ ಅಂಶಗಳನ್ನು ಶಿಕ್ಷಕರೊಂದಿಗೆ ಚರ್ಚಿಸಿ ಪರಿಹರಿಸಿಕೊಳ್ಳುತ್ತಿದ್ದೆ. ನೆನಪಿಲ್ಲಿ ಇರಿಸಿಕೊಳ್ಳಬೇಕಾದ ಅಧಿಕ ಪಠ್ಯವಸ್ತು ಇರುವ ಸಮಾಜ ವಿಜ್ಞಾನಕ್ಕೆ ಹೆಚ್ಚು ಗಮನ ನೀಡುತ್ತಿದ್ದೆ. ಪಠ್ಯ ಪುಸ್ತಕದ ಓದಿಗೆ ಆದ್ಯತೆ ನೀಡಿದ್ದೆ. ಗೈಡ್ ಓದುತ್ತಿದ್ದೆನಾದರೂ ಅದನ್ನು ಹೆಚ್ಚು ಅವಲಂಬಿಸಿರಲಿಲ್ಲ. ಮುಖ್ಯೋಪಾಧ್ಯಾಯರಿಂದ, ಎಲ್ಲ ಶಿಕ್ಷಕರಿಂದಲೂ ಉತ್ತಮ ಬೆಂಬಲ ಸಿಕ್ಕಿತ್ತು. ಶಾಲೆಯಲ್ಲಿ, ಮನೆಯಲ್ಲಿ ನನ್ನ ಮೇಲೆ ಒತ್ತಡವಿರಲಿಲ್ಲ’  –ಸುರಭಿ ಎಸ್. ಶೆಟ್ಟಿ  ಎಸ್‌ಎಸ್‌ಎಲ್‌ಸಿ ದ್ವಿತೀಯ ರ‍್ಯಾಂಕ್ ವಿಜೇತೆ

ಇದನ್ನೂ ಓದಿ:
► ಎಸ್.ಎಸ್.ಎಲ್‌ಸಿ ಪರೀಕ್ಷೆ ಫಲಿತಾಂಶ: ಉಡುಪಿ ಜಿಲ್ಲೆಗೆ ಎ ಗ್ರೇಡ್, 7ನೇ ಸ್ಥಾನ – https://kundapraa.com/?p=40160 .

 

 

Exit mobile version