Kundapra.com ಕುಂದಾಪ್ರ ಡಾಟ್ ಕಾಂ

ಜನರು ನೀಡಿದ ಅವಕಾಶವನ್ನು ಅವರ ಸೇವೆಗೆ ಮೀಸಲಿಡಿ: ಆಸ್ಕರ್

ಬೈಂದೂರು: ನಮ್ಮ ವ್ಯವಸ್ಥೆಯಲ್ಲಿ ಮೇಲಿನ ಸ್ತರದ ಜನಪ್ರತಿನಿಧಿಗಳಿಗೆ ಜನರನ್ನು ಹತ್ತಿರದಿಂದ ಕಂಡು ಅವರ ಸಮಸ್ಯೆಗಳನ್ನು ಆಲಿಸುವುದು ಮತ್ತು ಪರಿಹರಿಸುವುದು ಕಷ್ಟಸಾಧ್ಯ. ಜನರ ನಡುವೆಯೇ ಸದಾ ಇರುವ ಗ್ರಾಮ ಪಂಚಾಯತ್ ಸದಸ್ಯರು ಈ ಕೆಲಸವನ್ನು ನಿರ್ವಹಿಸಬೇಕು. ಅವರು ತಮಗೆ ಜನರು ನೀಡಿರುವ ಅವಕಾಶವನ್ನು ಅವರ ಸೇವೆಗೆ ಮೀಸಲಿಡಬೇಕು ಎಂದು ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್ ಹೇಳಿದರು.

ಉಪ್ಪುಂದ ಗ್ರಾಮೀಣ ಕಾಂಗ್ರೆಸ್ ಸಮಿತಿ ಆಶ್ರಯದಲ್ಲಿ ಅಲ್ಲಿನ ಶಂಕರ ಕಲಾಮಂದಿರದಲ್ಲಿ ನಡೆದ ಕಾಂಗ್ರೆಸ್ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯರ ತರಬೇತಿ ಮತ್ತು ಪಕ್ಷ ಕಾರ್ಯಕರ್ತರ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷ ತನ್ನ ಸುದೀರ್ಘ ಅಧಿಕಾರಾವಧಿಯಲ್ಲಿ ದೇಶದ ಸಮಗ್ರತೆ, ರಕ್ಷಣೆ ಮತ್ತು ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದೆ. ಅದರಿಂದಾಗಿ ದೇಶ ಜಗತ್ತಿನ ಮೂರನೆಯ ಶಕ್ತಿಯಾಗಿ ಹೊರಹೊಮ್ಮಿದೆ. ಈ ಪರಂಪರೆಯನ್ನು ಉಳಿಸಿಕೊಂಡರೆ ಇನ್ನು ಹತ್ತು ವರ್ಷದಲ್ಲಿ ಅದು ಎರಡನೆ ಸ್ಥಾನಕ್ಕೇರಲಿದೆ. ಪಕ್ಷದ ಕಾರ್ಯಕರ್ತರು ಅದರ ಈ ಮಹೋನ್ನತ ಸಾಧನೆಯ ಪಾಲುದಾರರು. ಅವರು ಇದನ್ನು ಜನರೊಂದಿಗೆ ಹಂಚಿಕೊಳ್ಳಬೇಕು ಎಂದು ಆಸ್ಕರ್ ಫೆರ್ನಾಂಡೀಸ್ ತಿಳಿಸಿದರು.

ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಪಿ. ನಾರಾಯಣ ಖಾರ್ವಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿದ್ದು, ನೂತನ ಗ್ರಾಮ ಪಂಚಾಯತ್ ಸದಸ್ಯರನ್ನು ಮತ್ತು ಸ್ಪರ್ಧಿಸಿ ಸೋತ ಅಭ್ಯರ್ಥಿಗಳನ್ನು ಸನ್ಮಾನಿಸಿದ ವಿಧಾನ ಪರಿಷತ್ ಸದಸ್ಯ ಕೆ. ಪ್ರತಾಪಚಂದ್ರ ಶೆಟ್ಟಿ ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಆಸ್ತಿ. ಅವರ ಭಾವನೆ ಮತ್ತು ಕೋರಿಕೆಗಳಿಗೆ ನಾಯಕರು ಸ್ಪಂದಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ತುಂಬಿಸಬೇಕು. ಅವರ ಹೊಣೆ ನಿರ್ವಹಿಸಲು ಅಗತ್ಯ ಬೆಂಬಲ ನೀಡಬೇಕು ಎಂದರು.

ಮೋಹನ ಪೂಜಾರಿ ಸ್ವಾಗತಿಸಿ, ಚಂದ್ರ ಪೂಜಾರಿ ವಂದಿಸಿದರು. ಎಸ್. ಮದನಕುಮಾರ್ ಪ್ರಸ್ತಾವನೆಗೈದರು. ನಾಗರಾಜ ನಿರೂಪಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷೆ ದುರ್ಗಮ್ಮ, ಬ್ಲೋಸಮ್ ಫೆರ್ನಾಂಡೀಸ್, ಪಕ್ಷದ ಪ್ರಮುಖರಾದ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಎಂ. ಮಂಜುನಾಥ ಖಾರ್ವಿ, ಎಂ. ಎ. ಗಫೂರ್, ಬಿ. ಹಿರಿಯಣ್ಣ, ವೆಂಕಟರಮಣ ಖಾರ್ವಿ ವೇದಿಕೆಯಲ್ಲಿದ್ದರು.

Exit mobile version