Kundapra.com ಕುಂದಾಪ್ರ ಡಾಟ್ ಕಾಂ

ಗದ್ದೆಗಳನ್ನು ಆವರಿಸಿದ ಅಂತರಗಂಗೆ. ಆತಂಕದಲ್ಲಿ ರೈತರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿಗೆ ಸಮೀಪದ ಹೇರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳ್ಳೂರು ಗ್ರಾಮದ ಕೆಲವೆಡೆ ನಾಟಿಯಾದ ಭತ್ತದ ಗದ್ದೆಯ ಮೇಲೆ ನೀರಿನಲ್ಲಿ ತೇಲಿಬಂದ ಅಂತರಗಂಗೆ ಕಳೆ ಹರಡಿಕೊಂಡಿರುವುದು ರೈತರನ್ನು ಕಂಗಾಲು ಮಾಡಿದೆ. ಅಲ್ಲಿನ ಕಾಕ್ತೋಟ, ನೀರಕೆರೆ, ಚಾಟಗೋಳಿ ಪ್ರದೇಶದ ಸಾಧಮ್ಮ ಶೆಟ್ಟಿ, ಸೂಲ್ಯಣ್ಣ ಶೆಟ್ಟಿ, ಸುಖೇಶ ದೇವಾಡಿಗ ಸೇರಿದಂತೆ ಹಲವರ ಸುಮಾರು ಹತ್ತಾರು ಎಕ್ರೆ ವಿಸ್ತಾರದ ಗದ್ದೆಗಳಲ್ಲಿ ಇದು ಕಂಡುಬಂದಿದೆ.

ಕಾಕ್ತೋಟದಲ್ಲಿ ಜೇಡಿ ಮಣ್ಣು ತೆಗೆದ ಸ್ಥಳದಲ್ಲಿ ಮಳೆನೀರು ತುಂಬಿಕೊಂಡಾಗ ಅಂತರಗಂಗೆ ಎಂಬ ನೀರಿನ ಮೇಲೆ ತೇಲುವ ಕಳೆ ಹುಟ್ಟಿಕೊಳ್ಳುತ್ತಿದೆ. ಹೆಚ್ಚು ಮಳೆಯಾದಾಗ ತೋಡುಗಳ ಮೂಲಕ ಹರಿಯುವ ನೀರಿನಲ್ಲಿ ಇವು ತೇಲಿಹೋಗುತ್ತವೆ ಮತ್ತು ತೋಡಿನ ಪಕ್ಕದ ಗದ್ದೆಗಳಿಗೆ ನುಗ್ಗುವ ನೆರೆ ನೀರಿನೊಂದಿಗೆ ಗದ್ದೆಯನ್ನು ಆವರಿಸುತ್ತವೆ. ಮೇಲಿನ ಮೂರೂ ಪ್ರದೇಶಗಳಲ್ಲಿ ನೀರು ಹರಿಯುವ ತೋಡಿನ ಒಂದು ಕಡೆ ಇರುವ ಹಲವು ಗದ್ದೆಗಳಲ್ಲಿ ಈಗ ಇದು ಹರಡಿಕೊಂಡಿದೆ. ಈಗ ರೈತರು ಈ ಕಳೆಯನ್ನು ಸಂಗ್ರಹಿಸಿ ಹತ್ತಿರದಲ್ಲಿ ಹರಿಯುವ ನದಿಗೆ ಎಸೆಯುತ್ತಿದ್ದಾರೆ.

ನಾಟಿಯಾದ ನೇಜಿಯ ಬುಡಗಳು ದೃಢಗೊಂಡು ಸುಳಿಗಳು ಬರುತ್ತಿರುವ ಈ ಅವಧಿಯಲ್ಲಿ ಸಸಿಗಳ ಮೇಲೆ ಹೀಗೆ ದಟ್ಟವಾಗಿ ಹರಡಿಕೊಂಡಿರುವ ಕಳೆಯಿಂದ ಸಸಿಗಳ ಬೆಳವಣಿಗೆ ಕುಂಠಿತವಾಗಲಿದೆ. ಅದು ಬೆಳೆ ಮತ್ತು ಫಸಲನ್ನೂ ಕುಂಠಿತಗೊಳಿಸಲಿದೆ ಎಂದು ರೈತರು ಆತಂಕಿತರಾಗಿದ್ದಾರೆ. ಸ್ಥಳ ಪರಿಶೀಲಿಸಿರುವ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಶೋಕಕುಮಾರ ಶೆಟ್ಟಿ ಕಂದಾಯ ಮತ್ತು ಕೃಷಿ ಇಲಾಖೆಗಳು ಇಲ್ಲಿ ಆಗಿರುವ ಹಾನಿಯನ್ನು ಅಂದಾಜು ಮಾಡಿ ಸಂಬಂಧಿಸಿದ ರೈತರಿಗೆ ಪರಿಹಾರನೀಡಬೇಕು ಎಂದು ಆಗ್ರಹಿಸಿದ್ದಾರೆ. ಇನ್ನೊಂದೆಡೆ ನದಿಗೆ ಎಸೆಯಲಾಗುತ್ತಿರುವ ಈ ಕಳೆ ಮುಂದೆ ಸಾಗಿ, ಮಳೆಬಂದು ನದಿ ನೀರಿನ ಮಟ್ಟ ಏರಿದಾಗ ಇನ್ನಾವುದೋ ಊರಿನ ಗದ್ದೆಗಳಿಗೆ ಮಾರಕವೆನಿಸಲಿದೆ. ಕೃಷಿ ಪರಿಣತರು ಈ ಕಳೆಯನ್ನು ನಿವಾರಿಸಲು ಇರುವ ಕ್ರಮವನ್ನು ರೈತರಿಗೆ ತಿಳಿಸಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

 

Exit mobile version