Kundapra.com ಕುಂದಾಪ್ರ ಡಾಟ್ ಕಾಂ

ಸಾಗರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ: ತೆಕ್ಕಟ್ಟೆ ಶಾಖೆ ಉದ್ಘಾಟನೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉದ್ಯಮ ಹಾಗೂ ಸಹಕಾರಿ ಸಂಸ್ಥೆಗಳು ಕೋರೋನೊತ್ತರ ಆತಂಕವನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನೂತನ ಶಾಖೆ ಆರಂಭಿಸಿ ಉತ್ತಮ ಠೇವಣಿ ಸಂಗ್ರಹಿಸಿರುವುದು ಶಾಘನೀಯ. ಸಂಸ್ಥೆಯಲ್ಲಿ ಮುಂದೆಯೂ ಉತ್ತಮ ವಹಿವಾಟು ನಡೆದು, ಸದಸ್ಯರು ಇದರ ಉಪಯೋಗ ಪಡೆಯುವಂತಾಗಲಿ ಎಂದು ಕುಂದಾಪುರ ಚಿನ್ಮಯಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಉಮೇಶ್ ಪುತ್ರನ್ ಹೇಳಿದರು.

ಅವರು ಶುಕ್ರವಾರ ತೆಕ್ಕಟ್ಟೆ ರಜತಾದ್ರಿ ಕಾಂಪ್ಲೆಕ್ಸ್‌ನಲ್ಲಿ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ನಿ. ಬೈಂದೂರು ಇದರ 8ನೇ ಶಾಖೆಯನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆ ವಹಿಸಿದ್ದ ಸಾಗರ್ ಕ್ರೆಡಿಟ್ ಕೋ-ಆಪರೇಟಿವ್‌ನ ಅಧ್ಯಕ್ಷ ಕೆ. ಗೋಪಾಲ ಪೂಜಾರಿ ಮಾತನಾಡಿ ತೆಕ್ಕಟ್ಟೆ ಶಾಖೆಗಾಗಿ ಸೂಕ್ತ ಜಾಗವನ್ನು ಗುರುತಿಸಿ, ಸುತ್ತಲಿನ ಗ್ರಾಮಕ್ಕೆ ಅನುಕೂಲವಾಗುವ ಸ್ಥಳದಲ್ಲಿ ಸಂಸ್ಥೆಯನ್ನು ಆರಂಭಿಸಲಾಗಿದೆ. ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಸಂಸ್ಥೆಯ ಅಭಿವೃದ್ಧಿಗೆ ನಿಸ್ವಾರ್ಥವಾಗಿ ಶ್ರಮಿಸಿದ್ದರಿಂದ ಎಂಟನೇ ಶಾಖೆ ಆರಂಭಿಸಲು ಸಾಧ್ಯವಾಗಿದ್ದು, ಸದಸ್ಯರ ಠೇವಣಿಗೆ ಉತ್ತಮ ಬಡ್ಡಿದರ ಹಾಗೂ ಅಗತ್ಯವುಳ್ಳವರಿಗೆ ಸಾಲಸೌಲಭ್ಯವನ್ನು ಕ್ಲಪ್ತ ಸಮಯದಲ್ಲಿ ಒದಗಿಸಿ ಸಂಸ್ಥೆ ಉತ್ತಮ ವ್ಯವಹಾರ ನಡೆಸುತ್ತಿದೆ ಎಂದರು.

ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಲತಾ ಸುರೇಶ್ ಶೆಟ್ಟಿ ಗಣಕಯಂತ್ರ ಉದ್ಘಾಟಿಸಿದರು. ಎಸ್‌ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಸೇಫ್ ಲಾಕರ್ ಉದ್ಘಾಟಿಸಿದರು. ಬಸ್ರೂರು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಗೋಪಾಲ ಪೂಜಾರಿ, ಪ್ರಾಥಮಿಕ ಕೃಷಿ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಕೋಮೆ ಕೊರವಡಿ ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಶೇಖರ ಕಾಂಚನ್, ಉಪ್ಪುಂದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಮೋಹನ ಪೂಜಾರಿ, ಕೋಡಿ ಚಕ್ರೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಗೋಪಾಲ ಪೂಜಾರಿ, ಉದ್ಯಮಿಗಳಾದ ಗಣೇಶ್ ಪುತ್ರನ್, ಸುರೇಶ್ ಶೆಟ್ಟಿ, ಶೇಖರ ಚಾತ್ರಬೆಟ್ಟು, ಸಂಸ್ಥೆಯ ನಿರ್ದೇಶಕರುಗಳಾದ ಕೆ. ಶಂಕರ ಪೂಜಾರಿ, ಕಲ್ಪನಾ ಭಾಸ್ಕರ್, ಕೆ. ಶ್ರೀನಿವಾಸ ಪೂಜಾರಿ, ಚಿಕ್ಕು ಪೂಜಾರಿ, ಎನ್. ಅಣ್ಣಪ್ಪ ಬಿಲ್ಲವ, ಜಯಸೂರ್ಯ ಪೂಜಾರಿ, ಪುಟ್ಟ ಎಮ್. ಬಿಲ್ಲವ, ಶೇಖರ ಪೂಜಾರಿ, ಯು. ಕೇಶವ ಪೂಜಾರಿ, ಉದಯ ಜಿ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

ಕಟ್ಟಡ ಮಾಲಿಕ ವಿಠ್ಠಲ ಪೂಜಾರಿ ಅವರನ್ನು ಸನ್ಮಾನಿಸಲಾಯಿತು. ಶಾಖೆಯ ಇಂಟೀರಿಯರ್ ಡಿಸೈನ್ ಮಾಡಿದ ವಿನಯ್ ಹಾಗೂ ಠೇವಣಿದಾರರನ್ನು ಗೌರವಿಸಲಾಯಿತು.

ಸಂಸ್ಥೆಯ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕುಷ್ಠು ಬಿಲ್ಲವ ವಂದಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿದರು.

ಚಿತ್ರಗಳು: ವಿಶ್ವನಾಥ್, ಛಾಯಾ ಸ್ಟುಡಿಯೋ

Exit mobile version