Kundapra.com ಕುಂದಾಪ್ರ ಡಾಟ್ ಕಾಂ

ಕೊಡೇರಿ ದೋಣಿ ದುರಂತದಲ್ಲಿ ಮೃತ ಮೀನುಗಾರರ ಮನೆಗೆ ಮೀನುಗಾರಿಕಾ ಸಚಿವ, ಶಾಸಕರ ಭೇಟಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕೊಡೇರಿಯಲ್ಲಿ ನಡೆದ ದೋಣಿ ದುರಂತದಲ್ಲಿ ಮೃತರಾದ ನಾಲ್ವರು ಮೀನುಗಾರರ ಮನೆಗಳಿಗೆ ಶುಕ್ರವಾರ ಬಂದರು ಮತ್ತು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಭೇಟಿ ನೀಡಿ ರೂ. 6 ಲಕ್ಷ ಮೊತ್ತದ ತುರ್ತು ಪರಿಹಾರದ ಆದೇಶ ಪ್ರತಿಯನ್ನು ಕುಟುಂಬಿಕರಿಗೆ ಹಸ್ತಾಂತರಿಸಿದರು.

ಬಳಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ದೋಣಿ ದುರಂತದಲ್ಲಿ ಮೃತರಾದ ಮೀನುಗಾರರ ಕುಟುಂಬಗಳಿಗೆ ತುರ್ತು ಪರಿಹಾರದ ಚೆಕ್ ವಿತರಿಸುವ ಬಗ್ಗೆ ಮುಖ್ಯಮಂತ್ರಿಗಳ ಹಾಗೂ ಎಲ್ಲಾ ಜನಪ್ರತಿನಿಧಿಗಳು ನಿರ್ಧರಿಸಿದ್ದರಿಂದ ಆರು ಲಕ್ಷ ರೂ. ನೀಡುವ ಬಗ್ಗೆ ಆದೇಶ ಪ್ರತಿ ನೀಡಿದ್ದೇವೆ. ಉಳಿದಂತೆ ಕುಟುಂಬಗಳಿಗೆ ಅವಶ್ಯವಿರುವ ಮನೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಿಕೊಡುವ ಬಗ್ಗೆ ಗರಿಷ್ಠ ಪ್ರಯತ್ನ ಮಾಡಲಾಗುವುದು ಎಂದರು.

ಶಾಸಕ ಬಿ. ಎಂ. ಸುಕುಮಾರ ಶೆಟ್ಟಿ ಮಾತನಾಡಿ ನಾಲ್ವರು ಮೀನುಗಾರರ ಕುಟುಂಬಕ್ಕೆ ಗರಿಷ್ಠ ಪರಿಹಾರ ದೊರಕಿಸಿಕೊಡುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ್ದೇನೆ. ಬ್ರೇಕ್ ವಾಟರ್ ಕಾಮಗಾರಿ ವಿಸ್ತರಿಸುವ ಬಗ್ಗೆಯೂ ಮನವಿ ಸಲ್ಲಿಸಿದ್ದೇನೆ ಎಂದರು. ಶಾಸಕರು ತಮ್ಮ ವೈಯಕ್ತಿಕ ರೂ. 25,000 ಚೆಕ್ ಹಸ್ತಾಂತರಿಸಿದರು.

ಈ ಸಂದರ್ಭ ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ, ಉಪಾಧ್ಯಕ್ಷೆ ಮಾಲಿನಿ ಕೆ, ಬಿಜೆಪಿ ಕ್ಷೇತ್ರಾಧ್ಯಕ್ಷ ದೀಪಕಕುಮಾರ್ ಶೆಟ್ಟಿ, ಬಿ.ಎಸ್. ಸುರೇಶ್ ಶೆಟ್ಟಿ, ಕರಣ ಪೂಜಾರಿ, ಮೀನುಗಾರ ಮುಖಂಡರಾದ ಮದನಕುಮಾರ್ ಉಪ್ಪುಂದ, ಆನಂದ ಖಾರ್ವಿ, ವೆಂಕಟರಮಣ ಖಾರ್ವಿ ಮೊದಲಾದವರು ಇದ್ದರು.

Exit mobile version