Kundapra.com ಕುಂದಾಪ್ರ ಡಾಟ್ ಕಾಂ

ಕಾಲ್ತೋಡು ಮಹಾಲಸಾ ಮಾರಿಕಾಂಬ ದೇಗುಲಕ್ಕೆ ಕನ್ನ

ಬೈಂದೂರು: ಕಾಲ್ತೋಡು ಗ್ರಾಮದ ಮಹಾಲಸಾ ಮಾರಿಕಾಂಬ ದೇವಳಕ್ಕೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು  ಸುಮಾರು 6ಲಕ್ಷ ಮೌಲ್ಯದ ಚಿನ್ನ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ ಘಟನೆ ವರದಿಯಾಗಿದೆ.

ಸಂಜೆ ಗಂಟೆ 7:30 ರ ಸುಮಾರಿಗೆ ಅರ್ಚಕರು ಪೂಜೆ ಮಾಡಿ ದೇಗುಲಕ್ಕೆ ಬೀಗ ಹಾಕಿ ಮನೆಗೆ ತೆರಳಿದ ಬಳಿಕ ತಡ ರಾತ್ರಿ ದೇವಳದ ಬಾಗಿಲಿನ ಬೀಗ ಮುರಿದು, ಒಳ ನುಗ್ಗಿದ ಕಳ್ಳರು ಗರ್ಭಗುಡಿಗೆ ತೆರಳಿ ದೇವರಿಗೆ ಅಲಂಕಾರ ಮಾಡಿ ಇಟ್ಟ ಸುಮಾರು 3.5 ಕೆ.ಜಿಯ ಬೆಳ್ಳಿಯ ಪ್ರಭಾವಳಿ, ಎರಡು ಪವನ್ ಚಿನ್ನದ ಮಾಂಗಲ್ಯ ಸರ ಹಾಗೂ ದೇವರ ವಿಗ್ರಹದ ಚಿನ್ನದ ಮೂಗುತಿ ಸೇರಿದಂತೆ ಸುಮಾರು ೬ಲಕ್ಷ ರೂ. ಮೌಲ್ಯದ ಚಿನ್ನದ ಹಾಗೂ ಬೆಳ್ಳಿಯ ಆಭರಣಗಳನ್ನು ದೋಚಿದ್ದಾರೆ.

ಶುಕ್ರವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಅರ್ಚಕರು ಪೂಜೆಗಾಗಿ ದೇವಾಲಯಕ್ಕೆ ಬಂದಾಗ ದೇಗುಲದ ಬಾಗಿಲಿನ ಬೀಗ ಮುರಿದಿರುವುದು ಕಂಡು ಬಂದಿದ್ದು, ಒಳ ಪ್ರವೇಶಿಸಿ ನೋಡಿದಾಗ ಕಳವು ಮಾಡಿರವುದು ಬೆಳಕಿಗೆ ಬಂದಿದೆ. ಕೂಡಲೇ ಸ್ಥಳೀಯರ ಸಹಕಾರದಿಂದ ಬೈಂದೂರು ಠಾಣೆಗೆ ಮಾಹಿತಿ ನೀಡಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರೊಂದಿಗೆ ಸ್ಥಳಕ್ಕಾಗಮಿಸಿದ ಕುಂದಾಪುರ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಬೈಂದೂರು ವೃತ್ತ ನಿರೀಕ್ಷಕ ಎಂ. ಸುದರ್ಶನ್, ಬೈಂದೂರು ಎಸ್‌ಐ ಸಂತೋಷ ಕಾಯ್ಕಿಣಿ ನೇತೃತ್ವದ ಪೋಲೀಸ್ ತಂಡ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕಾಲ್ತೋಡು ಮಹಾಲಸಾ ಮಾರಿಕಾಂಬ ದೇಗುಲ ಅತಿ ಪುರಾತನ ಹಾಗೂ ಪ್ರಖ್ಯಾತಿಯ ದೇವಾಲಯವಾಗಿದ್ದು, ಕಳೆದ ಎಳೆಂಟು ವರ್ಷದ ಹಿಂದೆ ಜೀರ್ಣೋದ್ದಾರಗೊಂಡಿದೆ. ಇಲ್ಲಿ ಕಳೆದ ಎರಡು ವರ್ಷದ ಹಿಂದೆ ಅಷ್ಟಬಂಧ ಬ್ರಹ್ಮಕಲೋತ್ಸವ ನಡೆದಿದ್ದು ಇತ್ತೀಚೆಗೆ ನವರಾತ್ರಿ ಉತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಊರಿನಲ್ಲಿ ಇದುವರೆಗೂ ಕಳವಾದ ಘಟನೆ ನಡೆದಿಲ್ಲ ಇದು ಮೊದಲ ಪ್ರಕರಣವಾಗಿದೆ ಎಂದು ಸ್ಥಳೀಯರು ಹೇಳುತ್ತಾರೆ.

Exit mobile version