Kundapra.com ಕುಂದಾಪ್ರ ಡಾಟ್ ಕಾಂ

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್: ವಿದ್ಯಾರ್ಥಿ ವೇತನ ವಿತರಣೆ, ಸಾಧಕರಿಗೆ ಸನ್ಮಾನ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ತಾಲೂಕಿನ ಉಪ್ಪುಂದ ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಉಪ್ಪುಂದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಸೋಮವಾರ ಯಡ್ತರೆಯ ಬಂಟರ ಭವನದಲ್ಲಿ ಜರುಗಿತು.

ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವಿದ್ಯೆಯೆಂಬುದು ಮಕ್ಕಳ ಭವಿಷ್ಯವನ್ನು ರೂಪಿಸುತ್ತದೆ. ವಿದ್ಯಾರ್ಥಿಗಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕಿಕೊಟ್ಟು ಅವರನ್ನು ಪ್ರೋತ್ಸಾಹಿಸುವ ಕಾರ್ಯ ಅಗತ್ಯ. ಓದುವ ಹಂಬಲವಿದ್ದು ಆರ್ಥಿಕ ಅಡಚಣೆ ಇರುವ ವಿದ್ಯಾರ್ಥಿಗಳಿಗೆ ಸಹಕಾರ ನೀಡುವ ಇಂತಹ ಕಾರ್ಯ ಶ್ಲಾಘನೀಯ. ಈ ಸೌಲಭ್ಯಗಳನ್ನು ಉಪಯೋಗಿಸಿಕೊಂಡು ಉತ್ತಮವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು ಉನ್ನತ ಹುದ್ದೆ ಏರಲು ಸಾಧ್ಯವಿದೆ. ಸಮಾಜದಲ್ಲಿ ಅನೇಕ ಉದ್ಯಮಿಗಳು ಇದ್ದು ಸಮಾಜಕ್ಕೆ ಮಿಡಿಯುವರ ಸಂಖ್ಯೆ ಕಮ್ಮಿ. ನಿಸ್ವಾರ್ಥವಾಗಿ ಸಮಾಜಕ್ಕಾಗಿ ಬದುಕುವ ಉದ್ಯಮಿಗಳ ಪೈಕಿ ಗೋವಿಂದ ಬಾಬು ಪೂಜಾರಿ ಓರ್ವರು ಎಂದರು.

ಶ್ರೀ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ಮ್ಯಾನೇಜಿಂಗ್ ಟ್ರಸ್ಟಿ ಗೋವಿಂದ ಬಾಬು ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಆರು ವರ್ಷಗಳಿಂದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುತ್ತಾ ಬಂದಿದ್ದು ಈ ಬಾರಿ 60 ಮಂದಿ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ನೀಡಲಾಗಿದೆ. ವಿದ್ಯಾರ್ಥಿಗಳು ಕಲಿಯುವ ಜೊತೆಗೆ ಮುಂದಿನ ಗುರಿಯಿಟ್ಟುಕೊಂಡಿರಬೇಕು. ಸಾಧಿಸುವ ಛಲದೊಂದಿಗೆ ಶ್ರಮವಹಿಸಿ ಮುಂದುವರಿದಾಗ ಗುರಿ ತಲುಪಲು ಸಾಧ್ಯ. ಕೊರೋನಾ ಸಂದರ್ಭ ಕಿಟ್ ವಿತರಣೆಗೆ ಮನೆಗೆ ತೆರಳಿದಾಗ ಕೆಲವರ ಕಷ್ಟದ ಪರಿಸ್ಥಿತಿ ಅರಿವಾಗಿದ್ದು ಅವರ ಕಷ್ಟಕ್ಕೆ ಕೈಲಾದಷ್ಟು ಸಹಕಾರ ನೀಡಲಾಗುತ್ತಿದೆ ಎಂದರು.

ಇದೇ ಸಂದರ್ಭ ಸಾಧಕ ವಿದ್ಯಾರ್ಥಿಗಳಾದ ಸುರಭಿ ಎಸ್. ಶೆಟ್ಟಿ, ಅನುಶ್ರೀ ಹಾಗೂ ಕುಂದಾಪುರ ಎಪಿಎಂಸಿ ಅಧ್ಯಕ್ಷ ವೆಂಕಟ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಹಾಗೂ ವೈದ್ಯಕೀಯ ನೆರವು ನೀಡಲಾಯಿತು.

ಕಾರ್ಯಕ್ರಮದಲ್ಲಿ ಬೈಂದೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ, ಕ್ಷೇತ್ರ ಶಿಕ್ಷಣಾಧಿಕಾರಿ ಜ್ಯೋತಿ ಶ್ರೀನಿವಾಸ್, ಉದ್ಯಮಿ ಗುರುರಾಜ ಪಂಜು ಪೂಜಾರಿ, ಬೈಂದೂರು ತಾಲೂಕು ಬಿಲ್ಲವ ಸಂಘದ ಅಧ್ಯಕ್ಷ ಗಣೇಶ್ ಎಲ್. ಪೂಜಾರಿ, ಪ್ರಮುಖರಾದ ಗಿರೀಶ್ ಬೈಂದೂರು, ವೀರೇಂದ್ರ ಶೆಟ್ಟಿ, ಶ್ರೀ ವರಲಕ್ಷ್ಮೀ ಕೋ-ಆಪರೇಟಿವ್ ನಿರ್ದೇಶಕರಾದ ಡೇನಿಯಲ್ ನಜರತ್, ಟ್ರಸ್ಟೀ ರಾಮ ಬಿಜೂರು, ಸದಸ್ಯರಾದ ಸುಧಾಕರ ಪೂಜಾರಿ, ಜಯರಾಮ ಶೆಟ್ಟಿ ಮೊದಲಾವರು ಇದ್ದರು. ಗೀತಾ ಬೈಂದೂರು ಪ್ರಾರ್ಥಿಸಿದರು. ಶಿಕ್ಷಕ ಸುಬ್ರಮಣ್ಯ ಗಾಣಿಗ ನಿರೂಪಿಸಿ, ವಂದಿಸಿದರು.

Exit mobile version