ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೃಢಸಂಕಲ್ಪ, ಪರಿಶುದ್ಧ ಮನಸ್ಸಿನಿಂದ ಮಾಡುವ ಕಾರ್ಯದಲ್ಲಿ ಸೋಲೆಂಬುದಿಲ್ಲ. ಕರ್ತವ್ಯದಲ್ಲಿ ಪ್ರಾಮಾಣಿಕತೆ, ಸ್ವಾಮಿನಿಷ್ಠೆ ಇದ್ದರೆ ಎಲ್ಲದರಲ್ಲಿಯೂ ಯಶಸ್ಸ ಕಾಣಲು ಸಾಧ್ಯವಿದೆ. ಕೆಲಸದಲ್ಲಿ ಚಿಕ್ಕದು ದೊಡ್ಡದು ಎಂಬುವುದಕ್ಕಿಂತ ಅದನ್ನು ಎಷ್ಟು ಶಿಸ್ತುಬದ್ಧವಾಗಿ ಮಾಡುತ್ತೇವೆ ಎನ್ನುವುದಷ್ಟೇ ಮುಖ್ಯ ಎಂದು ಯು. ಬಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಮ್ಯಾನೆಜಿಂಗ್ ಟ್ರಸ್ಟೀ ಯು. ಬಿ. ಶೆಟ್ಟಿ ಹೇಳಿದರು.
ಅವರು ಬುಧವಾರ ಬೈಂದೂರು ಯು. ಬಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬೈಂದೂರು ಬಾಡಾದ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಇಂಗ್ಲೀಷ್ ಪುಸ್ತಕ ವಿತರಣೆ, ಶಾಲೆಗೆ ಪಿಠೋಪಕರಣ ಹಸ್ತಾಂತರ ಹಾಗೂ ಸುಸಜ್ಜಿತ ಶೌಚಾಲಯವನ್ನು ಹಸ್ತಾಂತರಿಸಿ ಮಾತನಾಡಿದರು.
ಬಾಡಾ ಶಾಲೆಯನ್ನು ದತ್ತು ಸ್ವೀಕರಿಸಿ ಅದರ ಸರ್ವತೋಮುಖ ಅಭಿವೃದ್ಧಿಗಾಗಿ ಪಣತೊಡಲಾಗಿದೆ. ಅದರಂತೆಯೇ ಯಾವುದೇ ಲೋಪವಿಲ್ಲದೇ ಶಾಲೆಯ ಏಳ್ಗೆಗಾಗಿ ಶ್ರಮಿಸಲಾಗುವುದು. ಟ್ರಸ್ಟ್ ಮೂಲಕ ಹಲವು ಜನಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಈ ಬಗ್ಗೆ ಸಂತೃಪ್ತಿ ಇದೆ ಎಂದರು.
ವಿದ್ಯಾರ್ಥಿಗಳ ಶೌಚಾಲಯ ನಿರ್ಮಿಸಿದ ಗುತ್ತಿಗೆದಾರ ಸುಕುಮಾರ ಶೆಟ್ಟಿ ಸೂರ್ಕುಂದ ಅವರನ್ನು ಸನ್ಮಾನಿಸಲಾಯಿತು. ಯು. ಬಿ. ಶೆಟ್ಟಿ ಚಾರಿಟೇಬಲ್ ಟ್ರಸ್ಟ್‌ನ ಕಾರ್ಯದರ್ಶಿ ಯಶಶ್ರೀ ಶೆಟ್ಟಿ, ಬೈಂದೂರು ಶಿಕ್ಷಣ ಇಲಾಖೆಯ ಸಮನ್ವಯಕಾರ ಅಬ್ದುಲ್ ರವೂಫ್, ಶಾಲಾ ಎಸ್‌ಸಿಎಂಸಿ ಅಧ್ಯಕ್ಷ ಉಮೇಶ್ ಶೇರುಗಾರ್ ಉಪಸ್ಥಿತರಿದ್ದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಬಾಡ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶಾಲೆಯ ಮುಖ್ಯಶಿಕ್ಷಕ ಬಾಲಯ್ಯ ಶೇರುಗಾರ್ ಸ್ವಾಗತಿಸಿ, ಶಿಕ್ಷಕಿ ಆಶಾ ಕುಮಾರಿ ವಂದಿಸಿದರು. ಶಿಕ್ಷಕ ಭಾಸ್ಕರ್ ಎಸ್. ಕಾರ್ಯಕ್ರಮ ನಿರೂಪಿಸಿದರು.
ಇದನ್ನೂ ಓದಿ:
► ಲಾಭದ ದೃಷ್ಟಿ ನೋಡದೇ, ಗುಣಮಟ್ಟದ ಶಿಕ್ಷಣ ನೀಡುವ ಗುರಿ: ಯು. ಬಿ. ಶೆಟ್ಟಿ – https://kundapraa.com/?p=40705 .