Kundapra.com ಕುಂದಾಪ್ರ ಡಾಟ್ ಕಾಂ

ಜಿಲ್ಲಾ ಮುಖ್ಯ ಯೋಜನಾಧಿಕಾರಿಯಿಂದ ಮರವಂತೆ ಗ್ರಾಮ ಪಂಚಾಯತಿ ಜಮಾಬಂದಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಜಮಾಬಂದಿಯಲ್ಲಿ ಗ್ರಾಮ ಪಂಚಾಯಿತಿಯು ಗತ ಆರ್ಥಿಕ ವರ್ಷದಲ್ಲಿ ಮಾಡಿದ ಆಯವ್ಯಯ, ಅಭಿವೃದ್ಧಿ ಮತ್ತು ಆ ಸಂಬಂಧದ ದಾಖಲೆ ನಿರ್ವಹಣೆಗಳನ್ನು ಸಾರ್ವಜನಿಕರ ಎದುರು ತೆರೆದಿಟ್ಟು ಅವರ ತಪಾಸಣೆಗೆ ಒಳಪಡಿಸಲಾಗುವುದರಿಂದ ಅದನ್ನು ಸಾಮಾಜಿಕ ಲೆಕ್ಕ ತಪಾಸಣೆ ಎಂದು ಕರೆಯಲಾಗುತ್ತದೆ. ಅದು ಗ್ರಾಮಾಡಳಿತವು ಪಾರದರ್ಶಕ, ಉತ್ತರದಾಯಿ ಮತ್ತು ಸ್ಪಂದನಶೀಲ ಎಂಬ ಗಣತಂತ್ರದ ಮೌಲ್ಯಗಳನ್ನು ಎತ್ತಿಹಿಡಿಯುತ್ತದೆ ಎಂದು ಉಡುಪಿ ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹೇಳಿದರು.

ಮರವಂತೆ ಗ್ರಾಮ ಪಂಚಾಯಿತಿಯ ೨೦೧೯-೨೦ನೆ ವರ್ಷದ ಜಮಾಬಂದಿ ಅಧಿಕಾರಿಯಾಗಿ ಗುರುವಾರ ನಡೆಸಿದ ಜಮಾಬಂದಿಯ ವೇಳೆ ಮಾತನಾಡಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ನಿಯಮದಂತೆ ಎರಡು ಗ್ರಾಮ ಪಂಚಾಯಿತಿಗಳ ಜಮಾಬಂದಿ ನಡೆಸಬೇಕಿದ್ದು, ಅವರು ಮರವಂತೆಯನ್ನು ಆಯ್ಕೆಮಾಡಿಕೊಂಡಿದ್ದರು.

ಹಲವು ಮಹತ್ವದ ಸಾಧನೆಗಳನ್ನು ಮಾಡಿ ರಾಷ್ಟ್ರ ಮಟ್ಟದಲ್ಲಿಯೂ ಗುರುತಿಸಲ್ಪಟ್ಟ ಮರವಂತೆ ಗ್ರಾಮ ಪಂಚಾಯಿತಿಯ ಜಮಾಬಂದಿ ನಡೆಸುವುದು ಪ್ರತಿಷ್ಠೆಯ ವಿಷಯ. ಜಮಾಬಂದಿ ವರ್ಷದಲ್ಲಿ ಅದು ಆಡಳಿತ ಮತ್ತು ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲ ವಿಭಾಗಗಳಲ್ಲಿ ತನ್ನ ಪರಂಪರೆಯನ್ನು ಮುಂದುವರಿಸಿದೆ ಎಂದು ಅವರು ಶ್ಲಾಘಿಸಿದರು.

ಅಭಿವೃದ್ಧಿ ಅಧಿಕಾರಿ ರಿಯಾಜ್ ಅಹಮದ್ ಸ್ವಾಗತಿಸಿ ವಂದಿಸಿದರು. ಕರಸಂಗ್ರಾಹಕ ಶೇಖರ ಮರವಂತೆ ಅಧಿಕಾರಿಗಳು ತಪಾಸಣೆ ನಡೆಸಿ ಸಿದ್ಧಪಡಿಸಿದ್ದ ಜಮಾಬಂದಿ ವರದಿಯನ್ನು ಸಾರ್ವಜನಿಕರ ಮುಂದಿಟ್ಟರು. ಶ್ರೀನಿವಾಸ ರಾವ್ ಪ್ರತಿ ಅಂಶಗಳನ್ನು ವಿಶ್ಲೇಷಿಸಿ ಅವುಗಳಲ್ಲಿ ಯಾವುದನ್ನು ಜನರಿಗೆ ಉಪಯುಕ್ತವಾಗುವಂತೆ ಬದಲಾವಣೆ ಮಾಡಿಕೊಳ್ಳಬಹುದು ಎನ್ನುವ ಮಾರ್ಗದರ್ಶನ ನೀಡಿದರು. ಮಧ್ಯಾಹ್ನದ ಬಳಿಕ ಅವರು ಪಂಚಾಯಿತಿ ನಿರ್ವಹಿಸುತ್ತಿರುವ ಘನ ಮತ್ತು ದ್ರವ ಸಂಪನ್ಮೂಲ ಘಟಕ ಮತ್ತು ಆಯ್ದ ಕೆಲವು ಕಾಮಗಾರಿಗಳ ಗುಣಮಟ್ಟ ಪರಿಶೀಲಿಸಿದರು. ಜಮಾಬಂದಿಯ ಯಾವ ಹಂತದಲ್ಲಿಯೂ ಸಾರ್ವಜನಿಕರಿಂದ ಯಾವುದೇ ದೂರು ಬರಲಿಲ್ಲ.

ಆಡಳಿತಾಧಿಕಾರಿ ಜ್ಯೋತಿ ಬೈಂದೂರು, ಮಾಜಿ ಅಧ್ಯಕ್ಷರಾದ ಎಸ್. ಜನಾರ್ದನ ಮರವಂತೆ, ಅನಿತಾ ಆರ್.ಕೆ, ಮಾಜಿ ಉಪಾಧ್ಯಕ್ಷ ಗಣೇಶ ಪೂಜಾರಿ, ಮಾಜಿ ಸದಸ್ಯರಾದ ಸುಶೀಲಾ ಖಾರ್ವಿ, ಸುಶೀಲಾ ಪೂಜಾರಿ, ಮನ್ಸೂರ್ ಇಬ್ರಾಹಿಂ, ಕಾರ್ಯದರ್ಶಿ ಪಾರ್ವತಿ, ಮುಖ್ಯೋಪಾಧ್ಯಾಯ ಸತ್ಯನಾ ಕೊಡೇರಿ, ಗುತ್ತಿಗೆದಾರ ಚಂದ್ರಗುಪ್ತ ಖಾರ್ವಿ, ಸಾರ್ವಜನಿಕರು ಇದ್ದರು.

 

Exit mobile version