Site icon Kundapra.com ಕುಂದಾಪ್ರ ಡಾಟ್ ಕಾಂ

ದೇವಸ್ಥಾನದೊಳಗೆ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಸಾವು

ಕುಂದಾಪ್ರ ಡಾಟ್ ಕಾಂ ಸುದ್ದಿ

ಕುಂದಾಪುರ: ಗಂಗೊಳ್ಳಿ ದೇವಸ್ಥಾನದಲ್ಲಿ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಖಾರ್ವಿಕೇರಿಯ ದಾಕುಹಿತ್ಲು ನಿವಾಸಿ ರಾಘವೇಂದ್ರ ಖಾರ್ವಿ (35) ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಗಂಗೊಳ್ಳಿ ಖಾರ್ವಿಕೇರಿಯ ಮಹಾಮ್ಮಾಯಿ ಮಹಾಸತಿ ದೇವಸ್ಥಾನದಲ್ಲಿ ಮಹಾಲಯ ಅಮವಾಸ್ಯೆ ಪ್ರಯುಕ್ತ ಭಕ್ತರು ಸೇರಿದ್ದರು. ಈ ಸಂದರ್ಭ ಪೆಟ್ರೋಲ್ ಕ್ಯಾನ್ ಹಿಡಿದು ದೇವಸ್ಥಾನದೊಳಗೆ ಬಂದ ರಾಘವೇಂದ್ರ ಖಾರ್ವಿ ನೋಡ ನೋಡುತ್ತಿದ್ದಂತೆ ಮೈಮೇಲೆ ಪೆಟ್ರೋಲ್ ಸುರಿದುಕೊಂಡಿದ್ದಾರೆ. ಈ ವೇಳೆ ಸಮೀಪದಲ್ಲಿದ್ದ ಕಾಲು ದೀಪದಲ್ಲಿ ಉರಿಯುತ್ತಿದ್ದ ಬೆಂಕಿ ತಗುಲಿದ್ದು, ಕ್ಷಣದಲ್ಲಿ ಬೆಂಕಿ ರಾಘವೇಂದ್ರ ಖಾರ್ವಿಯನ್ನು ಆವರಿಸಿಕೊಂಡಿದೆ. ಬೆಂಕಿ ಹೊತ್ತಿ ಉರಿಯುತ್ತಿರುವ ರಾಘವೇಂದ್ರ ಖಾರ್ವಿಯನ್ನು ರಕ್ಷಿಸಲು ತೆರಳಿದವರಿಗೂ ಬೆಂಕಿಯ ತೀವ್ರತೆ ತಗುಲಿದ್ದು, ಸುಟ್ಟ ಗಾಯಗಳಾಗಿತ್ತು.

ಬೆಂಕಿಯ ತೀವ್ರತೆಯಿಂದ ಗಂಭೀರ ಸ್ಥಿತಿಯಲ್ಲಿದ್ದ ರಾಘವೇಂದ್ರ ಖಾರ್ವಿ ಹಾಗೂ ಬೆಂಕಿ ನಂದಿಸಲು ಪ್ರಯತ್ನಿಸಿ ಬೆಂಕಿಯ ತೀವ್ರತೆಯಿಂದ ಗಾಯಗೊಂಡವರನ್ನು ತಕ್ಷಣ ಗಂಗೊಳ್ಳಿಯ ಆಪತ್ಭಾಂದವ ಆಂಬುಲೆನ್ಸ್‍ನ ಇಬ್ರಾಹಿಂ ಹಾಗೂ ತಂಡ ಆಸ್ಪತ್ರೆಗೆ ಸಾಗಿಸುವಲ್ಲಿ ನೆರವಾಗಿದ್ದರು.

ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ರಾಘವೇಂದ್ರ ಅವರ ಮೈಮೇಲೆ ದೇವರು ಬರುತ್ತಿದ್ದರೂ ಅವರ ಸಮುದಾಯದ ದೇವಸ್ಥಾನದಲ್ಲಿ ಅವಕಾಶ ನೀಡಿರಲಿಲ್ಲ ಎಂದು ಸ್ಥಿಮಿತ ಕಳೆದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು. ರಾಘವೇಂದ್ರ ಖಾರ್ವಿ ಅವರ ಸ್ಥಿತಿ ಗಂಭೀರವಾಗಿದ್ದು, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

Exit mobile version