Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ರೋಟರಿಯಲ್ಲಿ ಆಟಿ ಸಂಭ್ರಮ

ಕುಂದಾಪುರ: ದೈಹಿಕ, ಮಾನಸಿಕವಾದ ಬಹುತೇಕ ಬಾಧೆಗಳು ನಾವು ತಿನ್ನುವ ಆಹಾರದ ಪರಿಣಾಮಗಳಾಗಿರುತ್ತದೆ. ಸತ್ವ, ರಜ, ತಮಗಳಿರುವ ಆಹಾರಗಳು ಆಯಾಯ ರೀತಿಯ ಶಕ್ತಿಯನ್ನು ದೇಹದಲ್ಲಿ ಉಂಟು ಮಾಡುವುದು ಸಹಜ. ಸಸ್ಯಹಾರವಿರಲಿ, ಮಾಂಸಹಾರವಿರಲಿ ಎಲ್ಲದರ ಬಳಕೆಯ ಕ್ರಮವನ್ನು ಆಯುರ್ವೇದದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿದ್ದು ಪ್ರತಿಯೊಬ್ಬರು ತಮ್ಮ ದೇಹದ ತೂಕ, ದೈನಂದಿನ ಶ್ರಮಕ್ಕನುಗುಣವಾಗಿ ಆಹಾರಕ್ರಮವನ್ನು ರೂಢಿಸಿಕೊಂಡಲ್ಲಿ ಆರೋಗ್ಯಪೂರ್ಣ ಸ್ವಸ್ಥ ಜೀವನ ನೆಡೆಸಬಹುದು ಎಂದು ಕುಂಭಾಸಿಯ ಶ್ರೀ ಧನ್ವಂತರಿ ಕೇಂದ್ರದ ಆಯುರ್ವೇದ ಚಿಕಿತ್ಸಾ ತಜ್ಞರಾದ ಡಾ. ಪ್ರಾಣದೇವ ಉಪಾಧ್ಯಾಯ ಹೇಳಿದರು.

ಅವರು  ರೋಟರಿ ಕ್ಲಬ್, ಕುಂದಾಪುರದ ಆಶ್ರಯದಲ್ಲಿ ಆಟಿ ಸಂಭ್ರಮದ ಅಂಗವಾಗಿ ಆಹಾರದಿಂದ ಆರೋಗ್ಯದ ಕುರಿತು ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡಿದರು.

ರೋಟರಿ ಕ್ಲಬ್ ಕುಂದಾಪುರದ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ ಚಿತ್ತೂರು ಸ್ವಾಗತಿಸಿದರು. ಲಿಟ್ರಸಿ ಛೇರ್‌ಮೆನ್ ಗೋಪಾಲ ಶೆಟ್ಟಿ ಹ್ಯಾಪಿ ಸ್ಕೂಲ್ ರೋಟರಿ ಯೋಜನೆಯ ಮಾಹಿತಿ ನೀಡಿದರು. ಇನ್‌ಫಾರ್ಮೆಶನ್ ಛೇರ್‌ಮೆನ್ ಡಾ. ಎಂ. ಎನ್. ಅಡಿಗ ರೋಟರಿ ಮಾಹಿತಿ ನೀಡಿದರು.  ಯುವಜನ ಸೇವೆ ನಿರ್ದೇಶಕ ಪ್ರವೀಣ ಟಿ ಅತಿಥಿಗಳನ್ನು ಪರಿಚಯಿಸಿದರು. ಕಾರ್ಯದರ್ಶಿ ಸಂತೋಷ ಕೋಣಿ ವಂದಿಸಿದರು.

ಆಟಿ ಸಂಭ್ರಮ : ಮಳೆಗಾಲದ ಆರೋಗ್ಯದಾಯಕ ವಿಶೇಷ ಖಾದ್ಯಗಳ ಆಟಿ ಊಟ ರೋಟರಿ ಸದಸ್ಯರಿಗೆ ಅಮೃತ ಸಿಂಚನ ನೀಡಿತು. ಪರಂಪರಾಗತವಾಗಿ ನಡೆದುಕೊಂಡು ಬರುತ್ತಿದ್ದ ಆಚರಣೆಗಳು ಆಧುನಿಕ ಜಗತ್ತಿನ ನಾಗಾಲೋಟದಲ್ಲಿ ಕಣ್ಮರೆಯಾಗುತ್ತಿರುವ ಈ ಕಾಲ ಘಟ್ಟದಲ್ಲಿ ನಮ್ಮ ಪೂರ್ವಿಕರು ಬಹಳ ದೂರದೃಷ್ಠಿಯನ್ನು ಹೊಂದಿ ಯಾವ ಕಾಲದಲ್ಲಿ ಯಾವ ಆಹಾರ ಕ್ರಮವನ್ನು ಅನುಸರಿಸಿದರೇ ದೇಹವನ್ನು ಸಧೃಡವಾಗಿ ಆರೋಗ್ಯಪೂರ್ಣವಾಗಿಡಲು ಸಾಧ್ಯ ಎಂಬುದನ್ನು ಕಂಡುಕೊಂಡ ಸಂಶೋಧನೆಗಳು ನಮ್ಮ ಜೀವನದ ಭಾಗವಾಗ ಬೇಕಿದೆ. ಅಂತಹ ವಿಶೇಷ ಗುಣವಿರುವ ಆಹಾರಕ್ರಮಗಳನ್ನು ನೆನಪಿಸುವ, ಅವುಗಳ ರುಚಿ ಸ್ವಾದವನ್ನು ಆಸ್ವಾದಿಸಲು ಆಟಿ ಸಂಭ್ರಮದ ಅಂಗವಾಗಿ ಹಮ್ಮಿಕೊಂಡ ಆಟಿ ವಿಶೇಷ ಊಟ ಕಾರ್ಯಕ್ರಮದಿಂದ ಸಾಧ್ಯವಾಯಿತು. ಈರುಳ್ಳಿ ಸೊಪ್ಪಿನ ಕೋಸುಂಬರಿ, ಕೊತ್ತಂಬರಿ ಸೊಪ್ಪಿನ ಚಟ್ನಿ, ಚಗಟೆ ಸೊಪ್ಪಿನ ಚಟ್ನಿ, ಪುದೀನಾ ಸೊಪ್ಪಿನ ಚಟ್ನಿ, ಕೆಸದ ಸೊಪ್ಪಿನ ಗೊಜ್ಜು, ನುಗ್ಗೆ ಸೊಪ್ಪಿನ ಪಲ್ಯ, ಕಣಲೆ ಪಲ್ಯ, ಬಾಳೆ ಕುಂಡಿಗೆ ಪಲ್ಯ, ದಾಸವಾಳ ಸೊಪ್ಪಿನ ಇಡ್ಲಿ, ಸಬ್ಬಸಿಗೆ ಸೊಪ್ಪಿನ ಪಲಾವ್, ಕೆಸದ ಸೊಪ್ಪಿನ ಪತ್ರೊಡೆ, ನುಗ್ಗೆ ಸೊಪ್ಪಿನ ಬೊಂಡಾ, ಬಾಳೆ ದಿಂಡಿನ ಸಾಸಿವೆ, ಉರಗನ ಸೊಪ್ಪಿನ ತಂಬಳಿ, ಪಾಲಕ್ ಸೊಪ್ಪಿನ ಸಾಸಿವೆ, ಕರಿಬೇವು ಸೊಪ್ಪಿನ ತಂಬಳಿ, ಪಾಂಡವ ಹರಿವೆ ಸಾಸಿವೆ, ಹುರುಳಿ ಸಾರು, ಹಾಲ್ ಬಾಯ್, ಅರಸಿನ ಎಲೆ ಗೋಧಿ ಪಾಯಸ, ಬಾಳೆ ಹಣ್ಣಿನ ಹಲ್ವ, ಮಜ್ಜಿಗೆ ಸೊಪ್ಪಿನ ಮಜ್ಜಿಗೆಯನ್ನು ಸವಿದ ಪ್ರತಿಯೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ಮನೆ ಮನೆಗಳಲ್ಲಿ ಸಾತ್ವಿಕ ಅಡುಗೆಯನ್ನು ರೂಢಿಸಿಕೊಳ್ಳುವ ಬಗ್ಗೆ ಚಿಂತಿಸಿದ್ದಾರೆ.

Exit mobile version