ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು : ಭಾರತ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಪ್ರಾಧಿಕಾರದ ಕಾರ್ಯಪಡೆಯ ಸದಸ್ಯರಾಗಿ ಇಲ್ಲಿನ ಸಾತ್ವಿಕ್ ವೀಗನ್ ಸೊಸೈಟಿಯ ಸಂಸ್ಥಾಪಕ ಶಂಕರನಾರಾಯಣ ನೇಮಕಗೊಂಡಿದ್ದಾರೆ. ಮೂಲತ ಭಾರತೀಯ ವೀಗನ್ ಸೊಸೈಟಿಯ ಸಂಸ್ಥಾಪಕರಾಗಿದ್ದ ಅವರು ಕೆಲವು ವರ್ಷಗಳ ಹಿಂದೆ ಬೈಂದೂರು ಸಮೀಪದ ಹೊಸೂರು ಎಂಬಲ್ಲಿ ಸಾತ್ವಿಕ ವೀಗನ್ ಸೊಸೈಟಿಯ ಹೆಸರಿನಲ್ಲಿ ಸಾತ್ವಿಕ ಆಹಾರ ಸೇವನೆಯ ಅಭಿಯಾನ ನಡೆಸುತ್ತಿದ್ದಾರೆ. ಅವರ ಸಂಘಟನೆಗೆ ಭಾರತ ಮತ್ತು ವಿದೇಶಗಳಲ್ಲಿ ಅನುಯಾಯಿಗಳು ಇದ್ದಾರೆ.
ಭಾರತವೂ ಸೇರಿದಂತೆ ಜಗತ್ತಿನಲ್ಲಿ ಲಭ್ಯವಿರುವ ವೀಗನ್ ಆಹಾರಗಳ (ಅಹಿಂಸಾಹಾರ) ವ್ಯಾಖ್ಯಾನವನ್ನು ಮರುಪರಿಶೀಲಿಸುವ, ಜಾಗತಿಕವಾಗಿ ಲಭ್ಯವಿರಬಹುದಾದ ಮಾದರಿಗಳ ಹಿನ್ನೆಲೆಯಲ್ಲಿ ಭಾರತದಲ್ಲಿ ವೀಗನ್ ಆಹಾರಗಳ ಪರಿವೀಕ್ಷಣೆ ಮತ್ತು ದೃಢೀಕರಣಕ್ಕೆ ಮಾರ್ಗದರ್ಶನ ಅಥವಾ ಸಲಹೆಗಳನ್ನು ರೂಪಿಸುವ ಮತ್ತು ಆಹಾರ ಪ್ರಾಧಿಕಾರವು ಸೂಚಿಸುವ ಇನ್ನಿತರ ಕಾರ್ಯಗಳನ್ನು ನಿರ್ವಹಿಸುವ ಹೊಣೆಯನ್ನು ಕಾರ್ಯಪಡೆಗೆ ಒಪ್ಪಿಸಲಾಗಿದೆ.
ಭೋಪಾಲದ ಐಸಿಎಆರ್‌ನ ನಿವೃತ್ತ ಪ್ರಧಾನ ವಿಜ್ಞಾನಿ ಡಾ. ಸುಮೇಧಾ ಎಸ್. ದೇಶಪಾಂಡೆ, ಬೆಂಗಳೂರು ಮೌಂಟ್ ಕಾರ್ಮೆಲ್ ಕಾಲೇಜಿನ ಪೌಷ್ಠಿಕಾಹಾರ ಮತ್ತು ಆಹಾರ ವಿಜ್ಞಾನ ವಿಭಾಗ ಮುಖ್ಯಸ್ಥೆ ಡಾ. ಸಂಗೀತಾ ಪಾಂಡೆ, ತಿರುವನಂತಪುರದ ಎನ್‌ಐಐಎಮ್‌ಎಸ್‌ನ ಡಾ. ಲಲಿತಾ ಅಪ್ಪುಕುಟ್ಟನ್, ಪುಣೆಯ ವೀಗನ್ ಫಸ್ಟ್‌ನ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಾಲಕ್ ಮೆಹತಾ, ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರತಿನಿಧಿ ಹಾಗೂ ಭಾರತ ಗುಣಮಟ್ಟ ಪರಿಷತ್ತಿನ ಪ್ರತಿನಿಧಿ ಕಾರ್ಯಪಡೆಯ ಇತರ ಸದಸ್ಯರಾಗಿರುವರು ಎಂದು ಪ್ರಾಧಿಕಾರ ಹೊಡಿಸಿದ ಆದೇಶದಲ್ಲಿ ತಿಳಿಸಲಾಗಿದೆ.

