Kundapra.com ಕುಂದಾಪ್ರ ಡಾಟ್ ಕಾಂ

ಕೇಂದ್ರ ರಾಜ್ಯ ಬಿಜೆಪಿ ಸರಕಾರಗಳಿಂದ ರೈತ, ಕಾರ್ಮಿಕ ವಿರೋದಿ ನೀತಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್ ಬಳಿಯಲ್ಲಿ ಕಾಂಗ್ರೆಸ್, ಜೆಡಿಎಸ್, ಸಿಪಿಎಂ, ಡಿವೈಎಫ್‌ಐ, ದಲಿತ ಸಂಘರ್ಷ ಸಮಿತಿ ಸಂಯುಕ್ತ ಆಶ್ರಯಲ್ಲಿ ನಡೆದ ಭೂ ಸುಧಾರಣಾ ಕಾಯ್ದೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಕಾಯ್ದೆಗಳ ವಿರುದ್ಧ ಪ್ರತಿಭಟನೆ ನಡೆಯಿತು.

ಪ್ರತಿಭಟನಾ ಸಭೆಯಲ್ಲಿ ರೈತ ಸಂಘದ ಉಡುಪಿ ಜಿಲ್ಲಾ ಮುಖಂಡ ಕೆ.ವಿಕಾಸ್ ಹೆಗ್ಡೆ ಮಾತನಾಡಿ ಪ್ರಧಾನಿ ದಿ. ಇಂದಿರಾ ಗಾಂಧಿ ಕಾಯ್ದೆ ಮೂಲಕ ಉಳುವವನನ್ನು ಹೊಲದೊಡೆಯ ಮಾಡಿದ್ದರು, ಮುಖ್ಯಮಂತ್ರಿ ದಿ. ದೇವರಾಜ ಅರಸು ಜೀತಪದ್ಧತಿ ಕಿತ್ತೊಗೆದು ಭೂಮಾಲೀಕರನ್ನಾಗಿಸುವ ದಿಟ್ಟ ಸಂಕಲ್ಪ ಮಾಡಿದ್ದರು ಎನ್ನುವುದನ್ನು ಜನರು ನೆನಪಿಸಿಕೊಳ್ಳಬೇಕಾಗಿದೆ ಎಂದು ಹೇಳಿದರು.

ಸಿಪಿಎಂ ಮುಖಂಡ ಕೆ, ಶಂಕರ್, ‘ರೈತರನ್ನು ಬದುಕನ್ನೇ ಕಸಿಯಲು ಹೊರಟಿರುವ ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರಗಳನ್ನು ಮನೆಗೆ ಕಳುಹಿಸಲು ಇನ್ನೊಂದು ಚುನಾವಣೆಯವರೆಗೆ ಕಾಯುವ ಅವಶ್ಯಕತೆ ಇಲ್ಲ’ ಎಂದರು.ದಲಿತ ಸಂಘರ್ಷ ಸಮಿತಿ (ಭೀಮವಾದ) ರಾಜ್ಯ ಸಮಿತಿ ಅಧ್ಯಕ್ಷ ಉದಯ್ಕುಮಾರ ತಲ್ಲೂರ್, ‘ರೈತ ವಿರೋಧಿ ಕಾಯ್ದೆ ವಿರೋಧಿಸದಿದ್ದರೆ, ತುತ್ತು ಊಟಕ್ಕೂ ಪರದಾಡಬೇಕಾಗುತ್ತದೆ’ ಎಂದರು.

ಕುಂದಾಪುರ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕಾನ್ಮಕ್ಕಿ ಹರಿಪ್ರಸಾದ್ ಶೆಟ್ಟಿ, ಎಚ್. ನರಸಿಂಹ(ಸಿಐಟಿಯು), ಶ್ಯಾಮಲಾ ಭಂಡಾರಿ( ಮಹಿಳಾ ಕಾಂಗ್ರೆಸ್), ರಾಜೇಶ್ ವಡೇರಹೋಬಳಿ(ಡಿವೈಎಫ್‌ಐ) ಸಭೆಯಲ್ಲಿ ಮಾತನಾಡಿದರು. ಪುರಸಭಾ ಸದಸ್ಯ ಕೆ.ಜಿ ನಿತ್ಯಾನಂದ, ಮುಖಂಡರಾದ ಮಲ್ಯಾಡಿ ಶಿವರಾಮ್ ಶೆಟ್ಡಿ, ವಿನೋದ್ ಕ್ರಾಸ್ತಾ, ಗಣೇಶ್ ಶೇರುಗಾರ್, ಕೇಶವ್ ಭಟ್, ಮಹಾಬಲ ವಡೇರಹೋಬಳಿ, ಬಲ್ಕೀಸ್ ಬಾನು, ರಾಜು ದೇವಾಡಿಗ, ರವಿ ವಿ.ಎಂ, ಸಂತೋಷ್ ಹೆಮ್ಮಾಡಿ, ವಿಜಯ ಕೆ.ಎಸ್. ಇದ್ದರು.

ಬೈಂದೂರಿನಲ್ಲಿ ನಡೆದ ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಭೂಸುಧಾರಣಾ ಕಾಯಿದೆ, ಎಪಿಎಂಸಿ ಕಾಯಿದೆ, ಅಗತ್ಯ ವಸ್ತುಗಳ ಕಾಯಿದೆ ಮತ್ತು ಕಾರ್ಮಿಕ ಕಾಯಿದೆಗಳ ತಿದ್ದುಪಡಿಗೆ ಮುಂದಾಗಿರುವ ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರದ ಹೆಜ್ಜೆ ರೈತ, ಕಾರ್ಮಿಕ ವಿರೋಧಿಯೂ, ಕಾರ್ಪೊರೇಟ್ ವಲಯದ ಪರವೂ ಆಗಿದೆ ಎಂದು ಆರೋಪಿಸಿದರು.

ಸಿಪಿಎಂ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ ಸಂಸತ್ ಮತ್ತು ವಿಧಾನ ಸಭೆಯಲ್ಲಿ ನಡೆದ ಕಾಯಿದೆಗಳ ತಿದ್ದುಪಡಿ ಕುರಿತು ಚರ್ಚೆ ಸಂದರ್ಭದಲ್ಲಿ ವಿರೊಧ ಪಕ್ಷಗಳನ್ನು ಹೊರಗಿಟ್ಟು ಅಥವಾ ಅವುಗಳಿಗೆ ಅವಕಾಶ ನಿರಾಕರಿಸಿ ತರಾತುರಿಯಲ್ಲಿ ಅವುಗಳಿಗೆ ಒಪ್ಪಿಗೆ ಪಡೆಯಲಾಗುತ್ತಿದೆ. ಇದು ನಮ್ಮ ಸಂವಿಧಾನ ಮತ್ತು ಪ್ರಜಾತಂತ್ರ ವ್ಯವಸ್ಥೆಗೆ ಬಗೆದ ದ್ರೋಹ ಎಂದು ದೂರಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್ ಕುಮಾರ್, ಕಾಂಗ್ರೆಸ್ ಮುಖಂಡರಾದ ಎಸ್. ರಾಜುಪೂಜಾರಿ, ಮೋಹನ ಪೂಜಾರಿ, ಗೌರಿ ದೇವಾಡಿಗ, ಜಗದೀಶ ದೇವಾಡಿಗ, ನಾಗರಾಜ ಗಾಣಿಗ, ಯುವ ಕಾಂಗ್ರೆಸ್ ಅಧ್ಯಕ್ಷ ಶೇಖರ ಪೂಜಾರಿ, ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ವೆಂಕಟೇಶ್ ಕೋಣಿ, ಮುಖಂಡರಾದ ಗಣೇಶ ತೊಂಡೆಮಕ್ಕಿ, ಮಾಧವ ದೇವಾಡಿಗ, ಶ್ರೀಧರ ಉಪ್ಪುಂದ, ಚಂದ್ರ ದೇವಾಡಿಗ, ಅಮ್ಮಯ್ಯ ಪೂಜಾರಿ, ಬ್ಲಾಕ್ ಜೆಡಿಎಸ್ ಅಧ್ಯಕ್ಷ ಸಂದೇಶ ಭಟ್, ನಿತಿನ್ ಶೆಟ್ಟಿ, ದಲಿತ ಸಂಘರ್ಷ ಸಮಿತಿಯ ನರಸಿಂಹ ಹಳಗೇರಿ, ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಹಸನ್ ಮಾವುಡ, ಅಂಬೇಡ್ಕರ್ ಯುವಕ ಮಂಡಲದ ಅಧ್ಯಕ್ಷ ಲಕ್ಷ್ಮಣ ಯಡ್ತರೆ, ದಯಾನಂದ ಇದ್ದರು.

Exit mobile version