ಕುಂದಾಪ್ರ ಡಾಟ್ ಕಾಂ ಸುದ್ದಿ.
ಮೂಡುಬಿದಿರೆ: ಆಳ್ವಾಸ್ ಕಾಲೇಜಿನ ಪಿ. ಜಿ. ಸೆಮಿನಾರ್ ಹಾಲ್‌ನಲ್ಲಿ ವೃತ್ತಿಪರ ವಾಣಿಜ್ಯ ವಿಭಾಗ ಆಯೋಜಿಸಿದ ’ಗಾಂಧಿ ಬೆಳಕಲ್ಲಿ ವರ್ತಮಾನ’ ಉದ್ಘಾಟನಾ ಕಾರ್ಯಕ್ರಮ ನಡೆಯಿತು
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ, ಆಳ್ವಾಸ್ ಪದವಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಯೋಗೀಶ್ ಕೈರೋಡಿ ’ಗಾಂಧಿ ಹೇಳಿರುವ ಹಾಗೆ ಆರ್ಥಿಕ ಸ್ವಾವಲಂಬನೆಯ ಜೊತೆಗೆ ಮಾನಸಿಕ ಸ್ವಾವಲಂಬನೆ ಕೂಡ ಆಗಬೇಕು. ಪ್ರಾಯೋಗಿಕವಾಗಿ ಸರಳ ಜೀವನ ನಡೆಸುವ ಬಗ್ಗೆ ಚಿಂತನೆಯಾಗಬೇಕು’ ಗಾಂಧಿಯವರು ಬದುಕಿನಲ್ಲಿ ಅಳವಡಿಸಿದ್ದ ಸರಳತೆ, ಸಂದೇಶವನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುತ್ತಾ, ಮಹಾತ್ಮನನ್ನು ಮತ್ತೊಂದು ತಲೆಮಾರಿಗೆ ತಲುಪಿಸುವ ಪ್ರಯತ್ನವಾಗಬೇಕು. ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ತನಗಾಗಿ ಏನನ್ನೂ ಕೂಡಿಡದೆ ಮಾನವೀಯತೆಗಾಗಿ ಬದುಕಿದ ಗಾಂಧಿ ನಮ್ಮೆಲ್ಲರ ಜನಮಾನಸದಲ್ಲಿ ಚಿರಸ್ಥಾಯಿಯಾಗಿರುತ್ತಾರೆ. ವರ್ತಮಾನದಲ್ಲೂ ಅವರ ಮಾತುಗಳು, ಅವರು ನಡೆದು ಬಂದ ರೀತಿ ಎಲ್ಲರಿಗೂ ಆದರ್ಶ ಎಂದು ತಿಳಿಸಿದರು.
ಹಸಿರು ಆವರಣ ಯೋಜನೆ:
ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿಯ ಕಾರ್ಯಕ್ರಮದಲ್ಲಿ ’ಗ್ರೀನ್ ಕ್ಯಾಂಪಸ್ ಪ್ರೊಜೆಕ್ಟ್’ ನ್ನು ಅನಾವರಣಗೊಳಿಸಲಾಯಿತು. ಒಂದು ವರ್ಷದ ಈ ಯೋಜನೆಯ ಅಡಿಯಲ್ಲಿ ಔಷಧೀಯ ಸಸ್ಯಗಳು, ಅಣಬೆ ಕ್ರಷಿ ಮತ್ತು ಇತರೆ ಗಿಡಗಳ ಕುರಿತು ಅಧ್ಯಯನ ಹಾಗೂ ಕಾಲೇಜು ಆವರಣದಲ್ಲಿ ಬೆಳೆಸುವತ್ತ ವಿದ್ಯಾರ್ಥಿಗಳನ್ನು ತರಬೇತಿಗೊಳಿಸಲಾಗುವುದು. ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಹಳ್ಳಿಗಳಲ್ಲಿ ಸ್ವಚ್ಛತೆ, ಪರಿಸರ ಜಾಗ್ರತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದಾಗಿ ಈ ಯೋಜನೆಯ ನಿರ್ದೇಶಕಿ ಅಪರ್ಣಾ ಕೆ. ತಿಳಿಸಿದರು.
ವೃತ್ತಿಪರ ವಾಣಿಜ್ಯ ವಿಭಾಗದ ಸಂಯೋಜಕ ಅಶೋಕ ಕೆ. ಜಿ. ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉಪನ್ಯಾಸಕಿ ನವ್ಯ ಶೆಡ್ತಿ ಕಾರ್ಯಕ್ರಮವನ್ನು ನಿರೂಪಿಸಿ, ಅನಂತಶಯನ ವಂದಿಸಿದರು.