Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶಾಸಕರಿಂದ ಸಾಮಾಜಿಕ ನ್ಯಾಯ ಒದಗಿಸುವ ಕೆಲಸವಾಗಲಿ: ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ವಂಡ್ಸೆಯಲ್ಲಿ ಮಹಿಳೆಯರ ಸ್ವಾವಲಂಬನಾ ಹೊಲಿಗೆ ವೃತ್ತಿ ತರಬೇತಿ ಕೇಂದ್ರವನ್ನು ಮುಚ್ಚಿರುವುದನ್ನು ಖಂಡಿಸಿ ಪಂಚಾಯತ್ ರಾಜ್ ಒಕ್ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಸರಣಿ ಸತ್ಯಾಗ್ರಹದ ಸಭೆ ಅಂಪಾರು ಬಸ್ ನಿಲ್ದಾಣದಲ್ಲಿ ನಡೆಯಿತು.

ಸಭೆಯನ್ನುದ್ದೇಶಿಸಿ ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ, ಹೋಬಳಿ ಕೇಂದ್ರವಾದ ವಂಡ್ಸೆಯಲ್ಲಿ ರಾಜ್ಯದಲ್ಲಿ ಪ್ರಥಮವಾಗಿ ಘನ ತ್ಯಾಜ್ಯ ಘಟಕ ಅನುಷ್ಟಾನಗೊಂಡಿತ್ತು. ಈ ಘಟಕಕ್ಕೆ ದೇಶದ ನಾನಾ ರಾಜ್ಯಗಳಿಂದ ಪ್ರತಿನಿಧಿಗಳು ಭೇಟಿ ನೀಡಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಜತೆಯಲ್ಲಿ ರಾಜ್ಯ ಬಿಜೆಪಿ ಮುಖಂಡರು ಸಹ ಭೇಟಿ ನೀಡಿ, ಘಟಕದ ಕಾರ್ಯವೈಖರಿ ಬಗ್ಗೆ ಪ್ರಶಂಸಿದ್ದರು. ಆದರೆ ಬೈಂದೂರು ಕ್ಷೇತ್ರದ ಶಾಸಕರಿಗೆ ಮಾತ್ರ ಇದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿಲ್ಲ. ಈ ಹಿನ್ನಲೆಯಲ್ಲಿ ವಂಡ್ಸೆಯಲ್ಲಿರುವ ಘನ ತ್ಯಾಜ್ಯ ಯೋಜನೆಯಡಿಯಲ್ಲಿ ಸ್ವಾವಲಂಬನಾ ಹೋಲಿಗೆ ತರಬೇತಿ ಕೇಂದ್ರವನ್ನು ಕಾನೂನು ಬಾಹಿರವಾಗಿ ಸ್ಥಳಾಂತರಿಸುವ ಮೂಲಕ ಬದುಕಿನ ಕನಸನ್ನು ಕಟ್ಟಿಕೊಂಡ ಮಹಿಳೆಯರು ಬೀದಿ ಪಾಲಾಗಿದ್ದಾರೆ. ಮೊದಲು ಶಾಸಕರು ಸಮಾಜಕ್ಕೆ ಸಾಮಾಜಿಕ ನ್ಯಾಯ ಕೊಡಿಸುವ ಕೆಲಸ ಮಾಡಲಿ ಎಂದು ಹೇಳಿದರು.

ಕಾಂಗ್ರೆಸ್ ಯುವ ಮುಖಂಡ, ನ್ಯಾಯವಾದಿ ವಿಕಾಸ್ ಹೆಗ್ಡೆ ಮಾತನಾಡಿ ಸುಮಾರು ಎಪ್ಪತ್ತಕ್ಕೂ ಅಧಿಕ ಮಂದಿ ಮಹಿಳೆಯರು ಶಾಸಕರ ಕುಮ್ಮಕ್ಕಿನಿಂದ ಬೀದಿ ಪಾಲಾಗಿದ್ದಾರೆ. ಮಹಿಳಾ ಸ್ವಾಲಂಬನ ಕೇಂದ್ರವನ್ನು ಸ್ಥಳಾಂತರಗೊಳಿಸುವ ಮೂಲಕ ಶಾಸಕರು ಜೇನುಗೂಡಿಗೆ ಕಲ್ಲು ಹೊಡೆದಿದ್ದಾರೆ. ಮಹಿಳೆಯರಿಗಾದ ಅನ್ಯಾಯಾಯದ ವಿರುದ್ದ ಹೋರಾಟ ಇನ್ನಷ್ಟು ತೀವ್ರಗೊಳ್ಳಲಿದೆ ಎಂದರು.

ತಾಲೂಕಿನ ಪಂಚಾಯತ್ ರಾಜ್ ಒಕ್ಕೂಟದ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಅಡಿಕೆಕೊಡ್ಲು, ಕಾರ್ಯದರ್ಶಿ ಶ್ರೀನಿವಾಸ ಗಾಣಿಗ, ಜಿ.ಪಂ. ಸದಸ್ಯರಾದ ಜ್ಯೋತಿ ಎಂ., ಡಾ. ಸುನಿತಾ ಶೆಟ್ಟಿ ಉಡುಪಿ, ತಾ. ಪಂ. ಸದಸ್ಯರಾದ ಎಸ್. ಕೆ. ವಾಸುದೇವ ಪೈ, ಸತೀಶ ಪೂಜಾರಿ ಕುರ್ಕುಂಜೆ, ಉದಯ್ ಜಿ. ಚಿತ್ತೂರು, ವಂಡ್ಸೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಕುಂದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಕಾನ್ಮಕ್ಕಿ, ಬೈಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್, ಶರತ್ ಕುಮಾರ ಶೆಟ್ಟಿ ಬಾಳಿಕೆರೆ, ಪ್ರಸನ್ನ ಕುಮಾರ ಶೆಟ್ಟಿ ಕೆರಾಡಿ, ಸದಾಶಿವ ಶೆಟ್ಟಿ ಶಂಕರನಾರಾಯಣ, ಸತೀಶ ಕುಮಾರ್ ಶೆಟ್ಟಿ ಕಡ್ರಿ, ಯುವ ಮುಖಂಡರಾದ ಮಂಜುನಾಥ ಕುಲಾಲ ಜನ್ಸಾಲೆ, ದಿನೇಶ್ ಹಳ್ಳಿಹೊಳೆ, ಆನಂದ ಶೆಟ್ಟಿ ಬಾಗಿಮನೆ, ವಿವಿಧ ಸಂಘಟನೆಗಳ ಮುಖಂಡರು ಕಾರ್ಯಕರ್ತರು ಉಪಸ್ಥತರಿದ್ದರು.

ಬಿ. ಸಂತೋಷ ಕುಮಾರ್ ಶೆಟ್ಟಿ ಬಲಾಡಿ ನಿರೂಪಿಸಿದರು. ಎಚ್. ಮನೋಹರ ಶೆಟ್ಟಿ ವಂದಿಸಿದರು.

Exit mobile version