Kundapra.com ಕುಂದಾಪ್ರ ಡಾಟ್ ಕಾಂ

ನ.1ಕ್ಕೆ ಎಎಸ್‌ಎನ್ ಹೆಬ್ಬಾರರ 12 ಪುಸ್ತಕಗಳ ಬಿಡುಗಡೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ವಕೀಲ, ವಾಗ್ಮಿ, ಲೇಖಕ ಎ.ಎಸ್.ಎನ್. ಹೆಬ್ಬಾರ್ ಅವರ 12 ಪುಸ್ತಕಗಳ ಗುಚ್ಛ ನ.1ರ ಕನ್ನಡ ರಾಜ್ಯೋತ್ಸವದಂದು ಕುಂದಾಪುರ ಕಲಾಮಂದಿರದಲ್ಲಿ ಬಿಡುಗಡೆಗೊಳ್ಳಲಿದೆ. ಅಂದು ಸಂಜೆ 5:30ಕ್ಕೆ ವಿನೂತನ ರಾಜ್ಯೋತ್ಸವ ಕಾರ್ಯಕ್ರಮವಾಗಿ ಕಲಾಕ್ಷೇತ್ರ-ಕುಂದಾಪುರ ಈ ಅಪೂರ್ವ ಸಮಾರಂಭವನ್ನು ಕೊರೊನಾ ಕಟ್ಟುಪಾಡಿನ ಚೌಕಟ್ಟಿನಲ್ಲಿ ನಡೆಸಲು ಸಜ್ಜಾಗಿದೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ವಹಿಸಲಿದ್ದು ಮುಖ್ಯ ಅತಿಥಿಗಳಾಗಿ ಮಾನ್ಯ ಮಂತ್ರಿಗಳಾದ ಕೋಟ ಶ್ರೀನಿವಾಸ ಪೂಜಾರಿ, ಸಾಹಿತಿ ಮತ್ತು ಮಾಜಿ ಪ್ರಾಂಶುಪಾಲರಾದ ಡಾ. ಜಯಪ್ರಕಾಶ್ ಮಾವಿನಕುಳಿ, ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ರಾಜ್ಯಾಧ್ಯಕ್ಷರಾದ ಹರಿಕೃಷ್ಣ ಪುನರೂರು, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನೀಲಾವರ ಸುರೇಂದ್ರ ಅಡಿಗ ಭಾಗವಹಿಸಲಿದ್ದಾರೆ.

ಸದಾ ಸಭೆ, ಸಮಾರಂಭ, ಸಮ್ಮೇಳನ, ಭಾಷಣ ಎಂದುತಿರುಗಾಟದಲ್ಲೇ ಇರುತ್ತಿದ್ದ, ತನ್ನ ಬರಹಗಳನ್ನು ಪುಸ್ತಕವಾಗಿಸಲು ಸಮಯವಿಲ್ಲವೆನ್ನುತ್ತಿದ್ದ ಹೆಬ್ಬಾರರಿಗೆ ಲಾಕ್‌ಡೌನ್ ಸದವಕಾಶ ಒದಗಿಸಿಕೊಟ್ಟಿತ್ತು. ಮನೆಯಲ್ಲೇ ಕುಳಿತುಕೊಳ್ಳುವ ಹಾಗಾದ್ದನ್ನು ಬಳಸಿಕೊಂಡ ಅವರು ತಮ್ಮ ಬರಹಗಳ ಕಡತ ಹೊರತೆಗೆದು ಪುಸ್ತಕ ರೂಪಕ್ಕಿಳಿಸಿದ್ದಾರೆ. ಪರಿಣಾಮವಾಗಿ ಅವರ ಕಥೆ, ಕವನ, ಹಾಸ್ಯಲೇಖನಗಳು, ಪ್ರವಾಸ ಕಥನ, ಅಂಕಣ ಬರಹಗಳು, ಆಕಾಶವಾಣಿಯ ಚಿಂತನಗಳೇ ಸೇರಿದಂತೆ 12 ಪುಸ್ತಕಗಳು ಹೆಬ್ಬಾರ್‌ರಿಗೆ 80 ತುಂಬುವ ಹಿಂದಿನ ದಿನ ಅನಾವರಣಗೊಳ್ಳಲಿವೆ. ಸಾಹಿತ್ಯಾಸಕ್ತರು ಕನ್ನಡ ಪ್ರೇಮಿಗಳು ಈ ಸಮಾರಂಭದಲ್ಲಿ ಭಾಗವಹಿಸಿ ಎಂದು ಕಲಾಕ್ಷೇತ್ರದ ಅಧ್ಯಕ್ಷ ಕಿಶೋರ್ ಕುಮಾರ್ ಕೋರಿದ್ದಾರೆ.

 

Exit mobile version