Kundapra.com ಕುಂದಾಪ್ರ ಡಾಟ್ ಕಾಂ

ಆಡಳಿತದಿಂದ ಕಣ್ಣೊರೆಸುವ ತಂತ್ರ ನಡೆದಿದೆ ಹೊರತು ದಲಿತರಿಗೆ ಭೂಮಿ ದೊರೆತಿಲ್ಲ: ಮಂಜುನಾಥ ಗಿಳಿಯಾರು

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 74 ವರ್ಷಗಳ ಬಳಿಕವೂ ದಲಿತರು ತಮ್ಮ ಹಕ್ಕುಗಳನ್ನು ಪಡೆಯಲು ಹೋರಾಟದ ಮಾರ್ಗ ಹಿಡಿಯಬೇಕಾಗಿರುವುದು ಅವರ ದುರ್ದೈವ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ, ವಕೀಲ ಮಂಜುನಾಥ ಗಿಳಿಯಾರು ವಿಷಾದಿಸಿದರು.

ದಲಿತ ಸಂಘರ್ಷ ಸಮಿತಿಯ ಬೈಂದೂರು ತಾಲ್ಲೂಕು ಘಟಕ, ತಾಲ್ಲೂಕು ಮಹಿಳಾ ಒಕ್ಕೂಟ ಮತ್ತು ಅಂಬೇಡ್ಕರ್ ಮಹಿಳಾ ಸಂಘ ಸೋಮವಾರ ಇಲ್ಲಿನ ತಾಲ್ಲೂಕು ಕಚೇರಿ ಎದುರು ನಮ್ಮ ಭೂಮಿ ನಮ್ಮ ಹಕ್ಕು ಹೋರಾಟದ ಅಂಗವಾಗಿ ನಡೆಸಿದ ಧರಣಿಯಲ್ಲಿ ಮಾತನಾಡಿದರು.

ಸರ್ಕಾರಿ ದಾಖಲೆಯಂತೆ ಉಡುಪಿ ಜಿಲ್ಲೆಯಲ್ಲಿ 1108 ಎಕ್ರೆ ದಲಿತ ಮೀಸಲು ಭೂಮಿ ಇದೆ. ದಾಖಲೆಗೆ ಸೇರದ ಇನ್ನೂ 300 ಎಕ್ರೆ ಇದೆ ಎಂದು ಅಂದಾಜಿಸಲಾಗಿದೆ. ಅದರಲ್ಲಿ ಬಹುಭಾಗವನ್ನು ನಿಯಮ ಉಲ್ಲಂಘಿಸಿ ವಿವಿಧ ಯೋಜನೆಗಳ ಹೆಸರಿನಲ್ಲಿ ಬಲಾಢ್ಯರಿಗೆ ಹಂಚಲಾಗಿದೆ. ಅದರ ವಿರುದ್ಧ ಮತ್ತು ದಲಿತರ ಹಕ್ಕಿನ ಭೂಮಿಯನ್ನು ಅವರಿಗೆ ನೀಡಿ ಎಂದು ಸಂಘಟನೆ ಆರು ವರ್ಷಗಳಿಂದ ಹೋರಾಡುತ್ತಿದೆ. ಆ ನಿಟ್ಟಿನಲ್ಲಿ ಆಡಳಿತದಿಂದ ಆಗಾಗ ಕಣ್ಣೊರಸುವ ತಂತ್ರ ನಡೆಯುತ್ತಿದೆಯೇ ಹೊರತು ದಲಿತರಿಗೆ ಭೂಮಿ ವಿತರಿಸಿಲ್ಲ. ಕಂದಾಯ ಕಚೇರಿಯಲ್ಲಿ ಭೂದಾಖಲೆ ಪ್ರತಿ ನೀಡುತ್ತಿಲ್ಲ. ಅಲ್ಲಿ ಹಣ ಕೊಟ್ಟವರ ಕೆಲಸ ಆಗುತ್ತಿದೆ. ಗ್ರಾಮ ಪಂಚಾಯಿತಿಗಳಿಂದ ಅನುದಾನ ವಂಚನೆ ನಡೆಯುತ್ತಿದೆ. ಉನ್ನತ ಅಧಿಕಾರಿಗಳು, ಜನಪ್ರತಿನಿಧಿಗಳು ದಲಿತರ ಅಳಲಿಗೆ ಸ್ಪಂದಿಸುತ್ತಿಲ್ಲ. ಈ ಪ್ರವೃತ್ತಿ ಶೀಘ್ರ ಕೊನೆಯಾಗದಿದ್ದರೆ ಮುಂದೆ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಹರ್ನಿಶಿ ಧರಣಿ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ದಲಿತ ಮೀಸಲು ಭೂಮಿ ಹಂಚಿಕೆ, ಆ ಭೂಮಿಯಲ್ಲಿ ಆಗಿರುವ ಆಕ್ರಮಣ ತೆರವು, ಉಪ್ಪುಂದದಲ್ಲಿ ಡಾ. ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಮೀಸಲಾದ ನಿವೇಶನದ ಆಕ್ರಮಣ ತೆರವುಗೊಳಿಸಿ ಅಲ್ಲಿ ಭವನ ನಿರ್ಮಾಣ, ಬೈಂದೂರು ಭವನದ ನವೀಕರಣ, ತಾಲ್ಲೂಕು ಕಚೇರಿ ಎದುರು ಡಾ. ಅಂಬೇಡ್ಕರ್ ಪ್ರತಿಮೆ ಸ್ಥಾಪನೆ, ಗುತ್ತಿಗೆ ನೌಕರ ನೇಮಕಾತಿಯಲ್ಲೂ ಮೀಸಲಾತಿ ಪಾಲನೆ, ಕೊರಗ ಸಮುದಾಯ ನೆಲಸಿರುವ ಸ್ಥಳವನ್ನು ಅವರಿಗೆ ವರ್ಗಾವಣೆ, ಹಳ್ಳಿಹೊಳೆ ದಲಿತ ಮೀಸಲು ರುದ್ರಭೂಮಿಯಲ್ಲಿ ಆಗಿರುವ ಅತಿಕ್ರಮಣ ತೆರವು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ನೀಡಲಾಯಿತು.

ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಧರಣಿಯನ್ನು ಉದ್ಘಾಟಿಸಿದರು. ಮುಖಂಡರಾದ ಮಂಜುನಾಥ ನಾಗೂರು, ಕೆ. ಸಿ. ರಾಜು ಬೆಟ್ಟಿನಮನೆ, ಗೀತಾ ಸುರೇಶ್‌ಕುಮಾರ್, ವಾಸುದೇವ ಮುದೂರು, ನಾಗರಾಜ ಉಪ್ಪುಂದ, ರಮೇಶ ಮರವಂತೆ, ಬಿ. ಶಿವರಾಮ, ಕೆ. ಕರುಣಾಕರ, ಶಿವರಾಜ ಬೈಂದೂರು, ಲಕ್ಷ್ಮಣ ಬೈಂದೂರು, ಕೆ. ಭಾಸ್ಕರ ಕೆರ್ಗಾಲು ಇದ್ದರು.

Exit mobile version