Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ ಪುರಸಭೆ ಅಧ್ಯಕ್ಷರಾಗಿ ವೀಣಾ ಭಾಸ್ಕರ, ಉಪಾಧ್ಯಕ್ಷರಾಗಿ ಸಂದೀಪ್ ಖಾರ್ವಿ ಅವಿರೋಧ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಇಲ್ಲಿನ ಪುರಸಭೆಗೆ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವೀಣಾ ಭಾಸ್ಕರ್ ಅಧ್ಯಕ್ಷರಾಗಿ, ಸಂದೀಪ್ ಖಾರ್ವಿ ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನ.3ರಂದು ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆದು ಬಿಜೆಪಿಯ ಒಮ್ಮತದ ಅಭ್ಯರ್ಥಿಗಳಾಗಿ ಅಧ್ಯಕ್ಷ ಸ್ಥಾನಕ್ಕೆ ವೀಣಾ ಭಾಸ್ಕರ, ಉಪಾಧ್ಯಕ್ಷ ಸ್ಥಾನಕ್ಕೆ ಸಂದೀಪ್ ಖಾರ್ವಿ ಅವರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಗೊಂಡರು. ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಪ್ರವರ್ಗಕ್ಕೆ ಮೀಸಲಾಗಿತ್ತು. ಒಟ್ಟು 23 ಸದಸ್ಯ  ಬಲ ಇರುವ ಪುರಸಭೆಯಲ್ಲಿ 14 ಬಿಜೆಪಿ, 8 ಕಾಂಗ್ರೆಸ್, 1 ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷೆಯಾಗಿ ಆಯ್ಕೆಯಾದ ವೀಣಾ ಭಾಸ್ಕರ ಟಿ. ಟಿ ರೋಡ್ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ. ಉಪಾಧ್ಯಕ್ಷರಾಗಿ ಆಯ್ಕೆಯಾಗಿರುವ ಸಂದೀಪ್ ಖಾರ್ವಿ ಬಹದ್ದೂರ್ ಷಾ ರೋಡ್ ವಾರ್ಡ್ ಪ್ರತಿನಿಧಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬಿಜೆಪಿ ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಶ್ರೀಲತಾ ಸುರೇಶ ಶೆಟ್ಟಿ, ಲಕ್ಷ್ಮೀ ಮಂಜು ಬಿಲ್ಲವ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು, ಕುಂದಾಪುರ ಮಂಡಲದ ಮಾಜಿ ಅಧ್ಯಕ್ಷ ಸುರೇಶ ಶೆಟ್ಟಿ ಕಾಡೂರು, ತಾ.ಪಂ.ಸದಸ್ಯ ಸುರೇಂದ್ರ ಖಾರ್ವಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಗುಣರತ್ನ, ತಾ.ಪಂ.ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷೆ ರೂಪಾ ಪೈ, ನಗರ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ವಿಜಯ ಎಸ್.ಪೂಜಾರಿ, ಬಿಜೆಪಿ ಕುಂದಾಪುರ ಕ್ಷೇತ್ರ ಪ್ರಭಾರಿ ಬಾಲಚಂದ್ರ ಭಟ್, ಪುರಸಭೆ ಮಾಜಿ ಅಧ್ಯಕ್ಷೆ ವಾಸಂತಿ ಸಾರಂಗ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುರೇಶ ಶೆಟ್ಟಿ, ಯುವಮೋರ್ಚಾದ ಅವಿನಾಶ ಶೆಟ್ಟಿ ಉಳ್ತೂರು, ಸುನೀಲ್ ಹೇರಿಕುದ್ರು, ಬಿಜೆಪಿ ಕಾರ್ಯದರ್ಶಿ ಸುರೇಂದ್ರ ಕಾಂಚನ್, ಮಂಜು ಬಿಲ್ಲವ, ವಕ್ವಾಡಿ ಸತೀಶ್ ಶೆಟ್ಟಿ, ಪುರಸಭೆ ಮಾಜಿ ಸದಸ್ಯ ರವಿರಾಜ ಖಾರ್ವಿ, ಪುಷ್ಪಶೇಟ್ ಮೊದಲಾದವರು ಉಪಸ್ಥಿತರಿದ್ದರು.

ಚುನಾವಣಾಧಿಕಾರಿಯಾಗಿ ತಹಶೀಲ್ದಾರ್ ಆನಂದಪ್ಪ ನಾಯಕ್ ಸಹಕರಿಸಿದರು. ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ಈ ಸಂದರ್ಭದಲ್ಲಿ ಹಾಜರಿದ್ದರು. ಪುರಸಭೆ ಸದಸ್ಯರಾದ ಮೋಹನದಾಸ ಶೆಣೈ, ದೇವಕಿ ಸಣ್ಣಯ್ಯ, ಚಂದ್ರಶೇಖರ ಖಾರ್ವಿ, ಗಿರೀಶ್ ಅಭಿನಂದಿಸಿ ಮಾತನಾಡಿದರು.

Exit mobile version