Kundapra.com ಕುಂದಾಪ್ರ ಡಾಟ್ ಕಾಂ

ಬೈಂದೂರು ಶಾಸಕರ ದಬ್ಬಾಳಿಕೆ ವಿರುದ್ಧದ ಹೋರಾಟ ಮುಂದುವರಿಯಲಿದೆ: ವಿನಯಕುಮಾರ್ ಸೊರಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಂಡ್ಸೆ ಮಹಿಳೆಯರ ಮೇಲೆ ನಡೆದ ದೌರ್ಜನ್ಯಕ್ಕೆ ಈ ಸರಣಿ ಹೋರಾಟ ಸೀಮಿತವಾಗುವುದಿಲ್ಲ. ಇವರದೇ ಪಕ್ಷದ ಪ್ರಧಾನಿ ಆತ್ಮನಿರ್ಭರ ಭಾರತ ಎಂದು ಹೇಳುತ್ತಿದ್ದರೆ, ಕ್ಷೇತ್ರದ ಶಾಸಕರು ಮಾತ್ರ ಸ್ವಾವಲಂಭಿಗಳ ಬದುಕನ್ನು ಬರ್ಬರಗೊಳಿಸಲು ಹೊರಟಿದ್ದಾರೆ. ಅಧಿಕಾರಿಗಳನ್ನು ಹೆದರಿಸಿ ಅವರ ಮೂಲಕ ನಡೆಸುತ್ತಿರುವ ಎಲ್ಲ ವಿಧದ ದಬ್ಬಾಳಿಕೆ ಮತ್ತು ದೌರ್ಜನ್ಯದ ವಿರುದ್ಧ ಹೋರಾಟ ಮುಂದುವರಿಯಲಿದೆ ಎಂದು ಮಾಜಿ ಸಚಿವ ವಿನಯಕುಮಾರ ಸೊರಕೆ ಎಚ್ಚರಿಸಿದರು.

ಕುಂದಾಪುರ ತಾಲ್ಲೂಕು ಪಂಚಾಯತ್ ರಾಜ್ ಒಕ್ಕೂಟ ಮತ್ತು ವಿವಿಧ ಸಂಘಟನೆಗಳ ಆಶ್ರಯದಲ್ಲಿ ಬೈಂದೂರಿನಲ್ಲಿ ಶುಕ್ರವಾರ ನಡೆದ ಧರಣಿಯಲ್ಲಿ ಅವರು ಮಾತನಾಡಿದರು. ವಂಡ್ಸೆ ಮಹಿಳಾ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರವನ್ನು ಕಾನೂನಿನ ಹದ್ದುಮೀರಿ ತೆರವುಗೊಳಿಸಿರುವುದರ ವಿರುದ್ಧದ ಹೋರಾಟದಲ್ಲಿ ನ್ಯಾಯಾಂಗದಿಂದ ಭಾಗಶ: ನ್ಯಾಯ ಸಿಕ್ಕಿದ ಕಾರಣ ಸರಣಿ ಧರಣಿ ಸತ್ಯಾಗ್ರಹ ಅಂತ್ಯಗೊಳ್ಳಲಿದೆ. ಆದರೆ ಸಂಪೂರ್ಣ ನ್ಯಾಯ ಸಿಗುವ ವರೆಗೆ ಹೋರಾಟ ಮುಂದುವರಿಯಲಿದ್ದು ಅಗತ್ಯವೆನಿಸಿದರೆ ಜಿಲ್ಲಾ ಪಂಚಾಯಿತಿಗೆ ಮುತ್ತಿಗೆ ಹಾಕಲಾಗುವುದು ಎಂದು ಅವರು ಹೇಳಿದರು.

ಜಿಲ್ಲಾ ರೈತ ಸಂಘದ ವಕ್ತಾರ, ವಕೀಲ ವಿಕಾಸ್ ಹೆಗ್ಡೆ ಮಾತನಾಡಿ ವಂಡ್ಸೆ ಸ್ವಾವಲಂಬನಾ ಕೇಂದ್ರದಿಂದ ಅಧಿಕಾರಿಗಳು ರಾತ್ರೋರಾತ್ರಿ ದರೋಡೆಗೈದ ಸ್ವತ್ತುಗಳನ್ನು ನ್ಯಾಯಾಲಯ ಮಹಿಳೆಯರಿಗೆ ಹಿಂದಿರುಗಿಸಿದೆ. ಆದರೆ ನಿಯಮಾನುಸಾರ ಅವರಿಗೆ ನೀಡಲಾಗಿದ್ದ ಕಟ್ಟಡದಿಂದ ಹೊರದಬ್ಬಿದ ಕ್ರಮದ ವಿರುದ್ಧ ನ್ಯಾಯಾಂಗ, ಮಹಿಳಾ ಆಯೋಗ ಮತ್ತು ವಿಧಾನ ಮಂಡಲದ ಅರ್ಜಿ ಸಮಿತಿ ಮುಂದೆ ದೂರು ಜೀವಂತವಾಗಿದ್ದು, ಅಲ್ಲಿ ಮಹಿಳೆಯರಿಗೆ ಸಂಪೂರ್ಣ ನ್ಯಾಯ ಸಿಗಲಿದೆ ಮತ್ತು ತಪ್ಪು ಮಾಡಿರುವ ಅಧಿಕಾರಿಗಳಿಗೆ ಶಾಸ್ತಿ ಆಗಲಿದೆ ಎಂಬ ವಿಶ್ವಾಸ ವ್ಕ್ತಪಡಿಸಿದರು.

ವಂಡ್ಸೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಒಕ್ಕೂಟದ ಅಧ್ಯಕ್ಷ ಉದಯಕುಮಾರ ಶೆಟ್ಟಿ ಪ್ರಾಸ್ತಾವಿಕ ಮಾತುಗಳಲ್ಲಿ ರಾಜ್ಯಕ್ಕೆ ಮಾದರಿಯಾಗಿ ಸ್ಥಾಪಿಸಿ, ನಿರ್ವಹಿಸಲಾಗುತ್ತಿರುವ ಘನ ದ್ರವ ಸಂಪನ್ಮೂಲ ಘಟಕ ಮತ್ತು ಅದರ ಅಧೀನ ಸಂಸ್ಥೆ ಮಹಿಳಾ ಸ್ವಾವಲಂಬನಾ ಹೊಲಿಗೆ ವೃತ್ತಿ ಮತ್ತು ತರಬೇತಿ ಕೇಂದ್ರದ ಯಶೋಗಾಥೆ ಮತ್ತು ಅದರ ವಿರುದಧ ನಡೆದ ದೌರ್ಜನ್ಯವನ್ನು ವಿವರಿಸಿದರು. ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಹಿಳೆಯರ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದರು. ಸಹಕಾರಿ ಧುರೀಣ ಎಸ್. ರಾಜು ಪೂಜಾರಿ ಸ್ವಾಗತಿಸಿದರು. ಪ್ರಮುಖರಾದ ಎಸ್. ಮದನ್‌ಕುಮಾರ್, ಹರಿಪ್ರಸಾದ ಶೆಟ್ಟಿ, ಪ್ರದೀಪಕುಮಾರ ಶೆಟ್ಟಿ, ಸಂತೋಷ ಶೆಟ್ಟಿ, ಶೇಖರ ಪೂಜಾರಿ, ದಲಿತ ಮಹಿಳಾ ಸಂಘಟನೆಯ ಗೀತಾ ಸುರೇಶ್, ಅಂಬೇಡ್ಕರ್ ಯುವಕ ಸಂಘದ ಲಕ್ಷ್ಮಣ ಬೈಂದೂರು ಇದ್ದರು.

Exit mobile version