Kundapra.com ಕುಂದಾಪ್ರ ಡಾಟ್ ಕಾಂ

ಆಡಳಿತಾಧಿಕಾರಿಗಳು ದಿನದಲ್ಲಿ ಒಂದು ಹೊತ್ತಾದರು ಗ್ರಾ.ಪಂಗಳಲ್ಲಿ ಕರ್ತವ್ಯ ನಿರ್ವಹಿಸಿ: ಮಹೇಂದ್ರ ಪೂಜಾರಿ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಗ್ರಾಮ ಪಂಚಾಯಿತಿ ಆಳಿತಾಧಿಕಾರಿಗಳು ತಮ್ಮ ಇಲಾಖಾ ಕರ್ತವ್ಯದ ಒತ್ತಡದ ಕಾರಣ ಪಂಚಾಯಿತಿಯ ಹೊಣೆ ನಿರ್ವಹಿಸದಿದ್ದರೆ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಅವರು ವಾರದಲ್ಲಿ ನಿಗದಿ ಪಡಿಸಿಕೊಂಡ ದಿನದಲ್ಲಿ ಕನಿಷ್ಠ ಒಂದು ಹೊತ್ತಾದರೂ ಗ್ರಾಮ ಪಂಚಾಯಿತಿಯಲ್ಲಿ ಹಾಜರಿದ್ದು ಕರ್ತವ್ಯ ನಿರ್ವಹಿಸಬೇಕು ಎಂದು ಬೈಂದೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಮಹೇಂದ್ರ ಪೂಜಾರಿ ಹೇಳಿದರು.

ಕುಂದಾಪುರ ತಾಲ್ಲೂಕು ಪಂಚಾಯಿತಿ ಸಭಾಭವನದಲ್ಲಿ ಶುಕ್ರವಾರ ನಡೆಸಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಕಂದಾಯ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದರು.

ಗ್ರಾಮ ಪಂಚಾಯಿತಿಗಳ ವಿವಿಧ ಯೋಜನೆಗಳ ಗುರಿ, ಅನುಷ್ಠಾನ, ಪ್ರಗತಿ, ಸಮಸ್ಯೆ ಪರಿಶೀಲಿಸಿ, ಅನುಷ್ಠಾನದ ವೇಗ ಹೆಚ್ಚಿಸಬೇಕು ಎಂದು ನಿರ್ದೇಶಿಸಿದರು. ಆಧಾರ ಕಾರ್ಡ್ ಪಡೆಯಲು ಅಗತ್ಯವಿರುವ ದೃಢೀಕರಣವನ್ನು ಆಡಳಿತಾಧಿಗಳು ನೀಡಬೇಕು. ನ. 20ರೊಳಗೆ ವಾರ್ಡ್‌ಸಭೆ, ಗ್ರಾಮಸಭೆ ನಡೆಸಿ ವರದಿ ನೀಡಬೇಕು. ಕಳೆದ ವರ್ಷ ಶಿರೂರು, ಕೊಲ್ಲೂರು, ಗೋಳಿಹೊಳೆ, ಪಡುವರಿ ಗ್ರಾಮ ಪಂಚಾಯಿತಿಗಳಲ್ಲಿ ಟ್ಯಾಂಕರ್‌ನಲ್ಲಿ ನೀರು ಪೂರೈಕೆ ಮಾಡಿರುವುದರ ಬಿಲ್ ಬಾಕಿಯಿದ್ದು, ಅದನ್ನು ಮಂಜೂರು ಮಾಡಿಸಿಕೊಳ್ಳಲು ಇನ್ನೊಮ್ಮೆಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಗಿಡಗಂಟಿಗಳು ಬೆಳೆದು ಸಂಚಾರಕ್ಕೆ ತೊಡಕಾಗುವಲ್ಲಿ ಅವುಗಳನ್ನು ನಿವಾರಿಸಬೇಕು, ಚರಂಡಿ ಸ್ವಚ್ಛಗೊಳಿಸಬೇಕು ಎಂದರು.

ಗ್ರಾಮಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ 94 ಸಿ ಪ್ರಕರಣಗಳ ವಿಚಾರದಲ್ಲಿ ಗ್ರಾಮ ಲೆಕ್ಕಿಗರು ಮತ್ತು ಪಂಚಾಯಿತಿ ಸಮನ್ವಯದಿಂದ ಕೆಲಸ ಮಾಡಬೇಕು. ಸಂಧ್ಯಾ ಸುರಕ್ಷಾ ಸೇರಿದಂತೆ ಎಲ್ಲ ಸಾಮಾಜಿಕ ಪಿಂಚಣಿ ಯೋಜನೆಗಳ ಅರ್ಜಿ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳಬೇಕು. ಗ್ರಾಮಗಳಲ್ಲಿ ಇರುವ ಸರ್ಕಾರಿ ಜಮೀನು, ಗೋಮಾಳ, ಡಿಸಿ ಮನ್ನಾ ಭೂಮಿ, ಕೆರೆಗಳು, ನಡೆಯುತ್ತಿರುವ ಅಕ್ರಮ ಗಣಿಗಾರಿಕೆ, ಅತಿಕ್ರಮಣ ಕುರಿತು ತಾಲ್ಲೂಕು ಪಂಚಾಯಿತಿಗೆ ಮಾಹಿತಿ ನೀಡಬೇಕು ಎಂದು ಗ್ರಾಮ ಲೆಕ್ಕಾಧಿಕಾರಿಗಳಿಗೆ ಸೂಚಿಸಿದರು.

ಉಪಾಧ್ಯಕ್ಷೆ ಮಾಲಿನಿ ಕೆ, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಸದಸ್ಯರಾದ ಶ್ಯಾಮಲಾ ಕುಂದರ್, ಪ್ರವೀಣಕುಮಾರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಭಾರತಿ. ಪ್ರಭಾರ ಸಹಾಯಕ ನಿರ್ದೇಶಕ ಮಂಜುನಾಥ ಶೆಟ್ಟಿ, ಗ್ರಾಮ ಪಂಚಾಯಿತಿಗಳ ಆಡಳಿತಾಧಿಕಾರಿಗಳು, ಅಭಿವೃದ್ಧಿ ಅಧಿಕಾರಿಗಳು ಮತ್ತು ಗ್ರಾಮ ಲೆಕ್ಕಿಗರು ಇದ್ದರು.

 

Exit mobile version