Kundapra.com ಕುಂದಾಪ್ರ ಡಾಟ್ ಕಾಂ

ಯುವಕರನ್ನು ತೊಡಗಿಸಿಕೊಂಡಾಗ ಸಂಘಟನೆಗೆ ಬಲ

ಕುಂದಾಪುರ: ಬಂಟ ಸಮುದಾಯದವರು ಎಲ್ಲ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಮಾಜದ ಮುಂಚೂಣಿಯಲ್ಲಿದ್ದಾರೆ. ಆದರೆ ಯುವ ಜನಾಂಗ ಮಾತ್ರ ಸಂಘಟನಾತ್ಮಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಿಕೆಯಲ್ಲಿ ಹಿಂದೆ ಉಳಿದಿದೆ. ಬಂಟ ಸಮಾಜದ ಯುವಕರಿಗೆ ಸಾಕಷ್ಟು ಉತ್ತೇಜನ ನೀಡುವ ಮೂಲಕ ಸಂಘಟನೆಗೆ ಇನ್ನಷ್ಟು ಬಲ ತಂದುಕೊಡಬೇಕು ಎಂದು ದುಬೈ ಫಾರ್ಚೂನ್‌ ಗ್ರೂಪ್‌ ಆಫ್‌ ಹೊಟೇಲ್ಸ್‌ನ ಆಡಳಿತ ನಿರ್ದೇಶಕ ವಕ್ವಾಡಿ ಪ್ರವೀಣ್‌ ಶೆಟ್ಟಿ ಹೇಳಿದರು.

ಅವರು ಕುಂದಾಪುರ ತಾಲೂಕು ಯುವ ಬಂಟರ ಸಂಘದ ವತಿಯಿಂದ ಕುಂದಾಪುರದ ಆರ್‌.ಎನ್‌. ಶೆಟ್ಟಿ ಸಭಾಭವನದಲ್ಲಿ ನಡೆದ 2015-16ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಸಮಾಜದ ಪ್ರತಿಯೊಬ್ಬರೂ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡು ಸಂಘಟನಾತ್ಮಕವಾಗಿ ಮುನ್ನಡೆಯಬೇಕು ಎಂದರು.

ಕುಂದಾಪುರ ತಾಲೂಕು ಯುವ ಬಂಟರ ಸಂಘದ ಅಧ್ಯಕ್ಷ ಅಂಪಾರು ನಿತ್ಯಾನಂದ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಗುರಿ, ಛಲದಿಂದ ಸಾಧನೆ

ರಾಜ್ಯ ಸರಕಾರದ ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆಯ ನಿವೃತ್ತ ನಿರ್ದೇಶಕ ಬಿ.ಎನ್‌. ಶೆಟ್ಟಿ ಆಶಯ ಭಾಷಣ ಮಾಡಿ, ಪ್ರತಿಯೊಬ್ಬರು ಭವಿಷ್ಯದಲ್ಲಿ ತಾನೇನಾಗಬೇಕು ಎನ್ನುವುದನ್ನು ಸ್ವತಃ ಅರಿತುಕೊಂಡಲ್ಲಿ ಉಜ್ವಲ ಭವಿಷ್ಯ ಪಡೆಯಲು ಸಾಧ್ಯ. ಎಲ್ಲರಲ್ಲೂ ಸಮಾನ ಪ್ರತಿಭೆ ಇರುವುದಿಲ್ಲ. ಆದರೆ ಪ್ರತಿಭೆಯನ್ನು ಗಳಿಸುವ ಹಕ್ಕು ಎಲ್ಲರಿಗೂ ಇದೆ. ಜೀವನದಲ್ಲಿ ಗುರಿ, ಛಲ ಹಾಗೂ ಆಸೆ ಇದ್ದಲ್ಲಿ ಮಾತ್ರ ಯಶಸ್ಸು ಗಳಿಸಲು ಸಾಧ್ಯ. ಅವಕಾಶ ಯಾರಿಗೂ ಬರುವುದಿಲ್ಲ. ಬಂದ ಅವಕಾಶವನ್ನು ಹಟಕಟ್ಟಿ ಸಾಧಿಸುವ ಛಲವನ್ನು ಹೊಂದಬೇಕು ಎಂದರು.

ಬಂಟರ ಮಾತೃ ಸಂಘದ ಕುಂದಾಪುರದ ಸಂಚಾಲಕ ಸಂಪೀಗೇಡಿ ಸಂಜೀವ ಶೆಟ್ಟಿ ಅವರು 2015-17ರ ಅವಧಿಧಿಗೆ ಆಯ್ಕೆಗೊಂಡ ನೂತನ ಪದಾಧಿಧಿಕಾರಿಗಳಿಗೆ ಪದಗ್ರಹಣ ನೆರವೇರಿಸಿದರು.

ತಾಲೂಕಿನ ವಿಭಿನ್ನ ಪ್ರದೇಶಗಳನ್ನು ಪ್ರತಿನಿಧಿಧಿಸುವ ಮತ್ತು ಕರ್ನಾಟಕ ರಾಜ್ಯದ ವಿವಿಧೆಡೆ ವ್ಯಾಸಂಗ ಮಾಡುತ್ತಿರುವ 400 ಮಂದಿ ವಿದ್ಯಾರ್ಥಿಗಳಿಗೆ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯದ ವಿದ್ಯಾರ್ಥಿವೇತನ ವಿತರಿಸಲಾಯಿತು.

ಕುಂದಾಪುರ ತಾಲೂಕಿನ ಗ್ರಾ.ಪಂ. ಚುನಾವಣೆಯಲ್ಲಿ ಆಯ್ಕೆಯಾದ ನೂತನ ಸದಸ್ಯರನ್ನು ಗೌರವಿಸಲಾಯಿತು. ರಾಜ್ಯ ಮತ್ತು ರಾಷ್ಟ್ರಮಟ್ಟಗಳಲ್ಲಿ ತಮ್ಮ ವಿಶಿಷ್ಟ ಸಾಮರ್ಥ್ಯದ ಮೂಲಕ ಗುರುತಿಸಿಕೊಂಡ ವೈದ್ಯ ಡಾ| ಆತ್ಮರಾಮ ಶೆಟ್ಟಿ, ನಾಗರಿಕ ಸೇವಾ ಪರೀಕ್ಷೆಯಲ್ಲಿ ರ್‍ಯಾಂಕ್‌ ವಿಜೇತೆ ಪ್ರಿಯಾ ಶೆಟ್ಟಿ ಪರವಾಗಿ ಅಕೆೆಯ ತಂದೆ, ಯಕ್ಷಗಾನ ಕಲಾವಿದ ಆಜ್ರಿ ಉದಯಕುಮಾರ್‌ ಶೆಟ್ಟಿ, ಕ್ರೀಡಾಪಟು ಪೃಥ್ವಿರಾಜ್‌ ಶೆಟ್ಟಿ, ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಶ್ರೇಯಸ್‌ ಶೆಟ್ಟಿ, ಆದರ್ಶ ಶೆಟ್ಟಿ, ಮುಖ್ಯಮಂತ್ರಿಗಳ ಮಕ್ಕಳ ಸಂಸತ್‌ನ ಉಡುಪಿ ಜಿಲ್ಲಾ ಪ್ರತಿನಿಧಿ ವೈಷ್ಣವಿ ಹೆಗ್ಡೆ ಅವರನ್ನು ಸಮ್ಮಾನಿಸಲಾಯಿತು.

ಮುಖ್ಯ ಅತಿಥಿಗಳಾಗಿ ಕುಂದಾಪುರದ ಡಿವೈಎಸ್‌ಪಿ ಮಂಜುನಾಥ ಶೆಟ್ಟಿ, ಬ್ರಹ್ಮಾವರದ ಭರತ್‌ ಸೆಲೆಬ್ರೇಶನ್ಸ್‌ ಪ್ರೈ. ಲಿ. ಆಡಳಿತ ನಿರ್ದೇಶಕ ಭರತ್‌ ಶೆಟ್ಟಿ, ಉದ್ಯಮಿ ಶೇರ್ಡಿ ಪ್ರಕಾಶ್‌ ಶೆಟ್ಟಿ, ಕುಂದಾಪುರ ತಾಲೂಕು ಬಂಟರ ಸಂಘದ ಅಧ್ಯಕ್ಷ ಬಾಂಡ್ಯ ಸುಧಾಕರ ಶೆಟ್ಟಿ, ಥಾಣೆ ಕನ್ನಡ ಸಂಘದ ಅಧ್ಯಕ್ಷ ರತ್ನಾಕರ ಜಿ. ಶೆಟ್ಟಿ,, ಕೆ.ಟಿ. ಶ‌ಂಕರ ಶೆಟ್ಟಿ, ಟಿ.ಎನ್‌. ರವಿರಾಜ್‌ ಶೆಟ್ಟಿ. ವಿಜಯಾನಂದ ಶೆಟ್ಟಿ ಹಳ್ನಾಡು, ಆನಂದ ರಾಮ ಶೆಟ್ಟಿ, ಜಯಶೀಲ ಶೆಟ್ಟಿ, ನೂತನ ಅಧ್ಯಕ್ಷ ಸುಕೇಶ್‌ ಶೆಟ್ಟಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಂದಾಪುರ ತಾಲೂಕು ಯುವ ಬಂಟರ ಸಂಘದ ಆಶ್ರಯದಲ್ಲಿ ಕಳೆದ ಎರಡು ವರ್ಷಗಳ ಅವಧಿಯಲ್ಲಿ ನಡೆದ ಚಟುವಟಿಕೆಗಳ ವಿವರಗಳನ್ನೊಳಗೊಂಡ ಯುವ ಚೈತನ್ಯ ವಿಶೇಷ ಸಂಚಿಕೆಯನ್ನು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಕೆಂಚನೂರು ಸೋಮಶೇಖರ ಶೆಟ್ಟಿ ಬಿಡುಗಡೆಗೊಳಿಸಿದರು.

ವಿದ್ಯಾರ್ಥಿ ವೇತನ ಸಮಿತಿಯ ಸಂಚಾಲಕ ಪ್ರತಾಪಚಂದ್ರ ಶೆಟ್ಟಿ ಹಳ್ನಾಡು ಸ್ವಾಗತಿಸಿ, ಪ್ರಸ್ತಾವನೆಗೈದರು. ಚೇತನ್‌ ಕುಮಾರ್‌ ಶೆಟ್ಟಿ ಸಮ್ಮಾನಿತರನ್ನು ಪರಿಚಯಿಸಿದರು. ಕುಂದಾಪುರ ತಾಲೂಕು ಯುವ ಬಂಟರ ಸಂಘದ ನೂತನ ಅಧ್ಯಕ್ಷ ಸುಕೇಶ್‌ ಶೆಟ್ಟಿ ಹೊಸಮಠ ನೂತನ ಪದಾಧಿಕಾರಿಗಳನ್ನು ಪರಿಚಯಿಸಿದರು. ಕಾರ್ಯಕ್ರಮವನ್ನು ಅಕ್ಷಯ್‌ ಹೆಗ್ಡೆ ಮೊಳಹಳ್ಳಿ ನಿರ್ವಹಿಸಿದರು. ಉಮೇಶ್‌ ಶಾನ್ಕಟ್ಟು ವಂದಿಸಿದರು.

Exit mobile version