Kundapra.com ಕುಂದಾಪ್ರ ಡಾಟ್ ಕಾಂ

ಮಹಾತ್ಮರ ಸಂದೇಶ ಜಗತ್ತಿಗೆ ಮಾದರಿ: ಮುಹಮ್ಮದ್ ಯಾಸೀನ್ ಮಲ್ಪೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ತಾಲೂಕು ಘಟಕದ ಆಶ್ರಯದಲ್ಲಿ ನಡೆದ ‘ಪ್ರವಾದಿ ಮುಹಮ್ಮದರ ಜೀವನ ಮತ್ತು ಸಂದೇಶ ಪರಿಚಯ’ ಕಾರ್ಯಕ್ರಮ ನಡೆಯಿತು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಮುಹಮ್ಮದ್ ಯಾಸೀನ್ ಮಲ್ಪೆ, ಕೆಲವೇ ಕುತರ್ಕಿಗಳ ಅವಹೇಳನ, ಅಗೌರವದ ಕೃತಿಗಳಿಂದ ಜಗತ್ತಿಗೆ ಬೆಳಕು ನೀಡಿದ ಪ್ರವಾದಿ ಮತ್ತು ಮಹಾತ್ಮರ ವ್ಯಕ್ತಿತ್ವ ಮತ್ತು ಸಂದೇಶಗಳಿಗೆ ಚ್ಯುತಿ ಉಂಟಾಗುವುದಿಲ್ಲ. ಅಂತಹ ಸಂದರ್ಭಗಳಲ್ಲಿ ನೊಂದವರು ಅಷ್ಟೇ ಕೀಳುಮಟ್ಟದ ಪ್ರತಿಕ್ರಿಯೆ ನೀಡಬಾರದು, ಮಹಾನ್ ವ್ಯಕ್ತಿಗಳು ಯಾವ ಮತ, ಪಂಥಗಳಿಗೆ ಸೇರಿದ್ದರೂ ಅವರು ಸಾರುವ ಸಂದೇಶಗಳ ಸಾರ ಜಗತ್ತಿಗೇ ಮಾರ್ಗದರ್ಶಕ ಆಗಿರುತ್ತದೆ. ಪ್ರವಾದಿ ಮುಹಮ್ಮದರು ಈ ಸಾಲಿಗೆ ಸೇರಿದವರು. ಒಕ್ಕೂಟ ನಡೆಸುವ ಇಂತಹ ಕಾರ್ಯಕ್ರಮಗಳು ವಾಸ್ತವ ವಿಚಾರಗಳನ್ನು ಪ್ರಚುರಪಡಿಸುವ ಉದ್ದೇಶ ಹೊಂದಿದೆ ಎಂದು ಹೇಳಿದರು.

ನಾವುಂದ ಆಕಳಬೈಲು ಜುಮ್ಮಾ ಮಸೀದಿಯ ಖತೀಬ್ ಮೌಲಾನಾ ಇಸ್ಮಾಯಿಲ್ ಮುಸ್ಲಿಯಾರ್, ಪ್ರವಾದಿ ಮುಹಮ್ಮದರ ಜೀವನ ಮತ್ತು ಸಂದೇಶಗಳನ್ನು ವಿವರಿಸಿದರು. ಬೈಂದೂರು ಹೋಲಿ ಕ್ರಾಸ್ ಚರ್ಚ್‌ ಧರ್ಮಗುರು ಫಾ. ವಿನ್ಸೆಂಟ್ ಕುವೆಲ್ಲೋ ಮಾತನಾಡಿ, ‘ಇಸ್ಲಾಂ, ಜಗತ್ತಿನ ಶ್ರೇಷ್ಠ ಧರ್ಮಗಳಲ್ಲಿ ಒಂದು’ ಎಂದರು.

ತಾಲ್ಲೂಕು ಒಕ್ಕೂಟದ ಕಾರ್ಯದರ್ಶಿ ಮೌಲಾನಾ ಜಮೀರ್ ಅಹ್ಮದ್ ರಶಾದಿ ಕುರಾನ್ ಪಠಿಸಿದರು. ಅಧ್ಯಕ್ಷ ಹಸನ್ ಮಾವಡ್ , ಜಿ. ಎಂ. ಇಬ್ರಾಹಿಂ ಗೋಳಿಹೊಳೆ , ಫಯಾಜ್ ಅಲಿ ಬೈಂದೂರು , ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್. ರಾಜು ಪೂಜಾರಿ, ಬಿಜೆಪಿ ಮಂಡಲ ಅಧ್ಯಕ್ಷ ದೀಪಕ್‌ಕುಮಾರ ಶೆಟ್ಟಿ, ಜೆಡಿಎಸ್ ಮುಖಂಡ ಯು. ಸಂದೇಶ ಭಟ್, ತಾಲ್ಲೂಕು ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜುನಾಥ ನಾಗೂರು, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಎಸ್. ಜನಾರ್ದನ ಮರವಂತೆ ಇದ್ದರು.

Exit mobile version