Kundapra.com ಕುಂದಾಪ್ರ ಡಾಟ್ ಕಾಂ

ಸರಕಾರದಿಂದ ಅಭಿವೃದ್ಧಿ ಕಾರ್ಯಗಳಿಗೆ ಒತ್ತು: ಸೊರಕೆ

ಬೈಂದೂರು: ಸಿದ್ದರಾಮಯ್ಯನವರ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷದಲ್ಲಿ ಉಡುಪಿ ಜಿಲ್ಲೆಯ ರಸ್ತೆ, ಸೇತುವೆ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗಾಗಿ ಒಂದು ಸಾವಿರ ಕೋಟಿ ರೂ. ವಿನಿಯೋಗಿಸಲಾಗಿದ್ದು, 5 ವರ್ಷದೊಳಗೆ 5 ಸಾವಿರ ಕೋಟಿ ರೂ. ವ್ಯಯಿಸಲು ಉದ್ದೇಶಿಸಲಾಗಿದೆ ಎಂದು ನಗರಾಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿನಯ ಕುಮಾರ ಸೊರಕೆ ಹೇಳಿದರು.

ಅವರು ಯಡ್ತರೆ ಗ್ರಾಮದ ನಾಗರಮಕ್ಕಿಂiಲ್ಲಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಮಂಜೂರಾದ 2.52 ಕೋಟಿ ವೆಚ್ಚದ ಮದ್ದೋಡಿ ಗೋಳಿಬೇರು ರಸ್ತೆ ಕಾಂಕ್ರೀಟಿಕರಣಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.

ರಾಜ್ಯ ಸರ್ಕಾರ ಗ್ರಾಮೀಣ ಭಾಗದ ರಸ್ತೆ ದುರಸ್ತಿಗಾಗಿ ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 17 ಕೋಟಿ ರೂ. ಅನುದಾನ ನೀಡಿದೆ. ಗ್ರಾಮ ವಿಕಾಸ ಕಾರ್ಯಕ್ರಮದ ಮೂಲಕ ಪ್ರತಿ ಶಾಸಕರಿಗೆ 5 ಗ್ರಾಮಗಳನ್ನು ದತ್ತು ಪಡೆದು ಅಭಿವೃಧ್ದಿಪಡಿಸಲು ಅವಕಾಶ  ಕಲ್ಪಿಸಿದೆ ಎಂದ ಅವರು ಮುಂದಿನ ದಿನಗಳಲ್ಲಿ ಸರ್ಕಾರ ಗ್ರಾಮೀಣ ಭಾಗದ ಸಮಗ್ರ ಅಭಿವೃದ್ಧಿಗಾಗಿ ನೂತನ ಯೋಜನೆಗಳನ್ನು ಜಾರಿಗೆ ತರಲು ಚಿಂತನೆ ನಡೆಸಿದೆ ಎಂದರು.

ಶಾಸಕ ಕೆ. ಗೋಪಾಲ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷೆ ಗೌರಿ ದೇವಾಡಿಗ, ತಾ.ಪಂ. ಅಧ್ಯಕ್ಷ ಭಾಸ್ಕರ ಬಿಲ್ಲವ, ಗ್ರಾ.ಪ. ಅಧ್ಯಕ್ಷ ನಾಗರಾಜ ಶೆಟ್ಟಿ, ತಾ.ಪಂ. ಸದಸ್ಯರಾದ ರಾಮ, ಮಂಜಯ್ಯ ಶೆಟ್ಟಿ, ಕಾರ್ಯನಿರ್ವಾಹಕ ಇಂಜಿನಿಯರ್ ಸುರೇಶ ಶೆಟ್ಟಿ, ಗುತ್ತಿಗೆದಾರ ಸೂಲಿಯಣ್ಣ ಶೆಟ್ಟಿ ಉಪಸ್ಥಿತರಿದ್ದರು. ರಾಜು ಪೂಜಾರಿ ಸ್ವಾಗತಿಸಿ, ಸುಧಾಕರ ಪಿ. ನಿರೂಪಿಸಿದರು.

Exit mobile version