ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ವಲಯ ಎಸ್‌ಎಸ್‌ಎಫ್, ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿಯ ಕುಂದಾಪುರ ಘಟಕ ಮತ್ತು ಉಡುಪಿ ಜಿಲ್ಲಾ ಬ್ಲಡ್ ಸೈಬೊ ಆಶ್ರಯದಲ್ಲಿ ನಾವುಂದ ಮೊಹಿಯುದ್ದೀನ್ ಜುಮ್ಮಾ ಮಸೀದಿಯ ಶಾದಿ ಮಹಲ್‌ನಲ್ಲಿ ಆಯೋಜಿಸಿದ್ದ ರಕ್ತದಾನ ಶಿಬಿರದ ಉದ್ಘಾಟನೆ ನಡೆಯಿತು.
ನಿವೃತ್ತ ಉಪನ್ಯಾಸಕ ಎಸ್. ಜನಾರ್ದನ ಮರವಂತೆ ಮಾತನಾಡಿ, ರಕ್ತದಾನ ಮಾಡುವವರು ತಮ್ಮ ಧರ್ಮ, ಜಾತಿ, ಬಂಧುವರ್ಗಕ್ಕೆ ಸೇರಿರುವ ನಿರ್ದಿಷ್ಟ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡು ರಕ್ತದಾನ ಮಾಡುವುದಿಲ್ಲ. ಅವರ ಉದ್ದೇಶ ರಕ್ತದ ಅಗತ್ಯ ಇರುವವರು. ಹಾಗಾಗಿ ರಕ್ತದಾನಿಗಳು ನಿಜವಾದ ಮಾನವತಾವಾದಿಗಳು ಎಂದು ಹೇಳಿದರು.
ನಾವುಂದ ಜಮಾತ್‌ನ ಅಧ್ಯಕ್ಷ ಹಾಜಿ ತೌಫೀಕ್ ಅಬ್ದುಲ್ಲಾ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಸ್‌ಎಫ್ ಜಿಲ್ಲಾಧ್ಯಕ್ಷ ಶಬ್ಬೀರ್ ಸಖಾಫಿ ಶಿಬಿರವನ್ನು ಉದ್ಘಾಟಿಸಿ, ಕೊರೊನಾ ಸೋಂಕು ಹರಡಿರುವ ಕಾರಣ ರಕ್ತನಿಧಿಗಳಲ್ಲಿ ರಕ್ತದ ಕೊರತೆ ಕಂಡುಬರುತ್ತಿದೆ. ಎಸ್‌ಎಸ್‌ಎಫ್ ಸದಸ್ಯರು ಈ ಕೊರತೆ ನೀಗಲು ಮತ್ತೆಮತ್ತೆ ರಕ್ತದಾನ ಮಾಡಬೇಕು ಎಂದರು. ರೆಡ್ ಕ್ರಾಸ್‌ನ ವೈದ್ಯ ಪ್ರತಿನಿಧಿ ಡಾ. ಶರಣ್, ಅರ್ಹ ಜನರು ನಿಯತಕಾಲಿಕವಾಗಿ ರಕ್ತದಾನ ಮಾಡುವುದರಿಂದ ಹೇಗೆ ಅವರ ಆರೋಗ್ಯ ವರ್ಧನೆಯಾಗುತ್ತದೆ ಎನ್ನುವುದನ್ನು ವಿವರಿಸಿದರು.
ಫರ್ವೇಜ್ ಕಿರಿಮಂಜೇಶ್ವರ ಸ್ವಾಗತಿಸಿದರು. ಹನೀಫ್ ನಯೀಮಿ ಗುಲ್ವಾಡಿ ವಂದಿಸಿದರು. ಬೈಂದೂರು ವಲಯ ಬ್ಲಡ್ ಸೈಬೊ ಉಸ್ತುವಾರಿ ಹನೀಫ್ ಸಅದಿ ನಾವುಂದ ನಿರೂಪಿಸಿದರು
ನಾವುಂದ ವಲಯ ಎಸ್‌ಎಂಎ ಅಧ್ಯಕ್ಷ ಜಿ. ಎಂ. ಸತ್ತಾರ್, ಬೈಂದೂರು ತಾಲೂಕು ಮುಸ್ಲಿಂ ಜಮಾತ್ ಅಧ್ಯಕ್ಷ ಮನ್ಸೂರ್ ಇಬ್ರಾಹಿಂ ಮರವಂತೆ, ಉಡುಪಿ ಜಿಲ್ಲಾ ಬ್ಲಡ್ ಸೈಬೊ ಉಸ್ತುವಾರಿ ಮಜೀದ್ ಹನೀಫಿ, ಡಬ್ಲ್ಯೂಎಫ್‌ಕೆ ಹಸೈನಾರ್ ಇದ್ದರು.