ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ನಾಗೂರಿನ ಹೆದ್ದಾರಿಯಲ್ಲಿ ನಿರ್ಮಿಸಿರುವ ಕೆಳಾಮನೆ ಅಬ್ಬಕ್ಕ ಶೀನಪ್ಪ ಶೆಟ್ಟಿ ಪ್ರಯಾಣಿಕರ ತಂಗುದಾಣ ಉದ್ಘಾಟನೆ ಇತ್ತಿಚೆಗೆ ನಡೆಯಿತು.
ಉದ್ಘಾಟಿಸಿ ಮಾತನಾಡಿದ ರೋಟರಿ ಜಿಲ್ಲಾ ಗವರ್ನರ್ ಬಿ. ರಾಜಾರಾಮ ಭಟ್, ರೋಟರಿ ಸದಸ್ಯರು ಸಮಾಜಸೇವೆಯಲ್ಲಿ ಸಂತಸ ತಾಳುತ್ತಾರೆ. ಕುಂದಾಪುರ ಮಿಡ್‌ಟೌನ್ ರೋಟರಿ ಕ್ಲಬ್ ಅಧ್ಯಕ್ಷ ನಳಿನ್‌ಕುಮಾರ ಶೆಟ್ಟಿ ಸಾರ್ವಜನಿಕರ ಉಪಯೋಗಕ್ಕಾಗಿ ನಾಗೂರಿನಲ್ಲಿ ನಿರ್ಮಿಸಿರುವ ಪ್ರಯಾಣಿಕರ ತಂಗುದಾಣ ಅದಕ್ಕೆ ಸಾಕ್ಷಿ, ಚತುಷ್ಪಥ ಹೆದ್ದಾರಿ ನಿರ್ಮಾಣ ಕಾಲದಲ್ಲಿ ಹಿಂದಿದ್ದ ತಂಗುದಾಣಗಳನ್ನು ಗುತ್ತಿಗೆದಾರರು ಕೆಡವಿದರು. ಆದರೆ ಅಷ್ಟೇ ಸಂಖ್ಯೆಯ ತಂಗುದಾಣಗಳನ್ನು ಅವರು ನಿರ್ಮಿಸಲಿಲ್ಲ. ಇದರಿಂದ ಹಲವು ಕಡೆ ಬಸ್ ಪ್ರಯಾಣಿಕರು ಬಸ್‌ಗಾಗಿ ಕಾಯಲು ಬಿಸಿಲು, ಮಳೆಯಲ್ಲಿ ನಿಲ್ಲುವಂತಾಗಿದೆ. ನಳಿನ್‌ಕುಮಾರ ಶೆಟ್ಟಿ ಅವರನ್ನು ಇತರ ದಾನಿಗಳೂ ಅನುಸರಿಸಿದರೆ ಹೆದ್ದಾರಿಯಲ್ಲಿ ಆಗಿರುವ ತಂಗುದಾಣಗಳ ಕೊರತೆ ನೀಗಬಹುದು ಎಂದು ಹೇಳಿದರು.
ನಳಿನ್‌ಕುಮಾರ ಶೆಟ್ಟಿ ಅವರ ಕುಸುಮ ಫೌಂಡೇಶನ್ ದತ್ತು ಸ್ವೀಕರಿಸಿ, ಅಭಿವೃದ್ಧಿ ಪಡಿಸಿರುವ ನಾಗೂರಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿದ ಭಟ್, ನಳಿನ್‌ಕುಮಾರ ಶೆಟ್ಟಿ ಶಾಲೆಯ ವಾಚನಾಲಯಕ್ಕೆ ಕೊಡುಗೆಯಾಗಿತ್ತ ಪುಸ್ತಕಗಳನ್ನು ಮುಖ್ಯೋಪಾಧ್ಯಾಯಿನಿ ಮರ್ಲಿ ಖಾರ್ವಿ ಅವರಿಗೆ ಹಸ್ತಾಂತರಿಸಿದರು. ಭೇಟಿಯ ನೆನಪಿಗಾಗಿ ತಂಗುದಾಣದ ಬಳಿ ಗಿಡಗಳನ್ನು ನೆಟ್ಟರು.
ನಳಿನ್‌ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ವಿಶ್ವನಾಥ ಶೆಟ್ಟಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ಗವರ್ನರ್ ಡಾ. ನಾಗಭೂಷಣ ಉಡುಪ, ಝೋನಲ್ ಲೆಫ್ಟನಂಟ್ ಐ. ನಾರಾಯಣ, ಕಾರ್ಯದರ್ಶಿ ನಿರಂಜನ್ ಶೆಟ್ಟಿ, ಜಿಲ್ಲಾ ಕಾರ್ಯದರ್ಶಿ ಕೆ. ಕೃಷ್ಣ ಕಾಂಚನ್, ಗವರ್ನರ್ ಅವರ ಪತ್ನಿ ವರದಾಂಬಾ ಭಟ್, ರೋಟರಿ ಸದಸ್ಯರು, ನಳಿನ್‌ಕುಮಾರ ಶೆಟ್ಟಿ ಕುಟುಂಬದ ಸದಸ್ಯರು ಇದ್ದರು.