ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ‘ಸಹಕಾರಿ ಸಂಸ್ಥೆಗೆ ಸೇರಿದವರು ಸಂಸ್ಥೆಯ ಬೆಳವಣಿಗೆ ಮತ್ತು ಸಾಧನೆ ಕುರಿತು ವಿಮರ್ಶೆ ನಡೆಸಬೇಕು. ಅದು ಮುಂದೆ ಸಾಗಬೇಕಾದ ದಾರಿಯ ಕುರಿತು ಚಿಂತನ– ಮಂಥನ ನಡೆಸಬೇಕು’ ಎಂದು ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹೇಳಿದರು.
ಕಿರಿಮಂಜೇಶ್ವರ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘದ ಆಶ್ರಯದಲ್ಲಿ ನಾಗೂರು ಒಡೆಯರಮಠ ಗೋಪಾಲಕೃಷ್ಣ ಕಲಾ ಮಂದಿರದಲ್ಲಿ ಗುರುವಾರ ನಡೆದ 67 ನೆ ಅಖಿಲ ಭಾರತ ಸಹಕಾರ ಸಪ್ತಾಹದ ಅಂಗವಾಗಿ ’ಯುವಜನ, ಮಹಿಳಾ ಮತ್ತು ಅಬಲ ವರ್ಗದವರಿಗಾಗಿ ಸಹಕಾರ ಸಂಸ್ಥೆಗಳು ದಿನ’ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಸಹಕಾರಿ ಸಂಸ್ಥೆಗಳಿವೆ. ಆದರೆ, ಅವುಗಳ ಹುಟ್ಟು, ಬೆಳವಣಿಗೆ, ಸಾಧನೆಗಳ ಕುರಿತು ದಾಖಲೆಗಳು ಅಲಭ್ಯವಾಗಿವೆ. ಆದ್ದರಿಂದ ಯಶಸ್ವಿ ಸಹಕಾರಿ ಸಂಸ್ಥೆಗಳ ಸಾಕ್ಷ್ಯಚಿತ್ರ ನಿರ್ಮಾಣ ಮಾಡಬೇಕು ಎಂದರು.
ವಿಶಿಷ್ಟ ಸಾಧನೆಗಳ ಮೂಲಕ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಿರಿಮಂಜೇಶ್ವರ ಮಹಿಳಾ ಸಹಕಾರಿಯನ್ನು ಅಭಿನಂದಿಸಲಾಯಿತು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷೆ ಅನ್ನಪೂರ್ಣ ಉಡುಪ ಸ್ವಾಗತಿಸಿದರು. ಕೋಟ ಪಡುಕೆರೆ ಲಕ್ಷ್ಮೀ ಸೋಮ ಬಂಗೇರ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕಿ ಪ್ರಮೀಳಾ ಜೆ. ವಾಝ್ ದಿಕ್ಸೂಚಿ ಭಾಷಣ ಮಾಡಿದರು.
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಘವೇದ್ರ ಕೆ ವಂದಿಸಿದರು. ಗೋವಿಂದ ಎಂ. ನಿರೂಪಿಸಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಗೌರಿ ದೇವಾಡಿಗ, ತಾಲ್ಲೂಕು ಪಂಚಾಯಿತಿ ಸದಸ್ಯೆ ಶ್ಯಾಮಲಾ ಕುಂದರ್, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರಾದ ಎಸ್. ರಾಜು ಪೂಜಾರಿ, ಮಹೇಶ ಹೆಗ್ಡೆ ಮೊಳಹಳ್ಳಿ, ಸಹಕಾರ ಸಂಘಗಳ ಉಪ ನಿಬಂಧಕ ಅರುಣಕುಮಾರ್ ಎಸ್. ವಿ, ಸಹಕಾರಿ ಯೂನಿಯನ್ ನಿರ್ದೇಶಕ ಶ್ರೀಧರ ಪಿ. ಎಸ್, ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಪುರುಷೋತ್ತಮ ಎಸ್. ಪಿ ಇದ್ದರು.
ಸಂಘದ ಸ್ಥಾಪಕಾಧ್ಯಕ್ಷೆ ರತ್ನಾ ಪಿ. ಹೆಬ್ಬಾರ್, ಮಾಜಿ ಅಧ್ಯಕ್ಷೆ ನಾಗವೇಣಿ ಕಾರಂತ್, ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಬಾಲಕೃಷ್ಣ ಶ್ಯಾನುಭಾಗ್ ಅವರನ್ನು ಸನ್ಮಾನಿಸಲಾಯಿತು.