Kundapra.com ಕುಂದಾಪ್ರ ಡಾಟ್ ಕಾಂ

ಕಂಬದಕೋಣೆ: ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕನ್ನಡ ಜಾನಪದ ಪರಿಷತ್ ಬೆಂಗಳೂರು ಮತ್ತು ಉಡುಪಿ ಜಿಲ್ಲಾ ಘಟಕ ಹಾಗೂ ಸಂವೇದನಾ ವಿಜ್ಞಾನ ಮತ್ತು ವಾಣಿಜ್ಯ ಪ್ರಥಮ ದರ್ಜೆ ಕಾಲೇಜು ಕಂಬದಕೋಣೆ ಸಂಯುಕ್ತ ಆಶ್ರಯದಲ್ಲಿ ಕನ್ನಡ ಜಾನಪದ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಗಣೇಶ ಗಂಗೊಳ್ಳಿ, ಜನಸಾಮಾನ್ಯರ ಬದುಕಿನ ಸಾರವೇ ಆಗಿರುವ ಜಾನಪದ ಸಾಹಿತ್ಯವನ್ನು ಉಳಿಸಿ, ಮುಂದಿನ ತಲೆಮಾರಿಗೆ ವರ್ಗಾಯಿಸುವ ಗುರುತರ ಜವಬ್ದಾರಿ ನಮ್ಮ ಮೇಲಿದೆ. ಆಯಾಯ ಕಾಲದ ಜನರ ಜೀವನ, ಆಚಾರ ವಿಚಾರ, ಸಾಹಿತ್ಯ, ಸಂಸ್ಕೃತಿಯನ್ನು ಕಟ್ಟಿ ಕೊಡುವ ಜನಪದ ಸಾಹಿತ್ಯ ಅಂದಿನ ಇತಿಹಾಸವನ್ನು ತೆರೆದಿಡುತ್ತದೆ. ತಮ್ಮೊಳಗಿನ ಬೇಗುದಿ, ಅಸಮಾಧಾನ, ಸಂತೋಷ, ಸಂಭ್ರಮವನ್ನು ಹೊರ ಹಾಕಲು ಜನಪದ ಸಾಹಿತ್ಯ ಸಾಮಾನ್ಯರಿಗೆ ಸಹಕಾರಿಯಾಗಿತ್ತು.ಎಂದರು.

ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಡಾ.ಎಸ್. ಬಾಲಾಜಿಯವರ ನಿರ್ದೇಶನದಂತೆ ಯಳಜಿತದ ಜಾನಪದ ಕಲಾವಿದ ರಾಮ ಮರಾಠಿ ಹಾಗೂ ಕನ್ನಡ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸಂವೇದನಾ ಕಾಲೇಜಿನ ವಿದ್ಯಾರ್ಥಿನಿ ಕು. ರಾಜೇಶ್ವರಿಯವರನ್ನು ಸನ್ಮಾನಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ಗೌರವ ಕಾರ್ಯದರ್ಶಿ ಡಾ. ಸುಬ್ರಹ್ಮಣ್ಯ ಭಟ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕಸಾಪ ಬೈಂದೂರು ತಾಲೂಕಿನ ಅಧ್ಯಕ್ಷ ರವೀಂದ್ರ ಎಚ್., ಕನ್ನಡ ಜಾನಪದ ಪರಿಷತ್ ಬೈಂದೂರು ತಾಲೂಕು ಅಧ್ಯಕ್ಷ  ನಳೀನ್‌ ಕುಮಾರ್ ಶೆಟ್ಟಿ, ಸಾಹಿತಿಗಳಾದ ಪುಂಡಲೀಕ್ ನಾಯಕ್, ಬಿ. ಪ್ರವೀಣ ಶೆಟ್ಟಿ, ಸಂವೇದನಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಸಂಧ್ಯಾ ಭಟ್ ಉಪಸ್ಥಿತರಿದ್ದರು. ಕು.ಅನುಶ್ರೀ ಸ್ವಾಗತಿಸಿ, ಕು. ಪ್ರತಿಮಾ ಕಾರ್ಯಕ್ರಮ ನಿರೂಪಿಸಿ, ಕು. ಮುಜೈನಾ ವಂದಿಸಿದರು.

Exit mobile version