Kundapra.com ಕುಂದಾಪ್ರ ಡಾಟ್ ಕಾಂ

ಮೋದಿ ಸರಕಾರ ಗಾಂಧಿ ಕಂಡ ಸ್ವರಾಜ್ಯದ ಕಲ್ಪನೆ ನನಸು ಮಾಡುತ್ತಿದೆ: ನಳಿನ್ ಕುಮಾರ್ ಕಟೀಲ್

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕಾಂಗ್ರೆಸ್ ಮುಕ್ತ ಭಾರತವಾಗಬೇಕಾದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಮುಕ್ತ ಪಂಚಾಯತಿಗಳು ಆಗಬೇಕು. ಮುಂದಿನ ದಿನಗಳಲ್ಲಿ ಪಂಚಾಯತ್ಗಳಿಗೆ ಅದ್ಬುತ ಶಕ್ತಿ ಬರಲಿದೆ. ಸ್ವರಾಜ್ಯ ಸಂಕಲ್ಪ ಈಡೇರಲಿದೆ. ಆ ಹಿನ್ನೆಲೆಯಲ್ಲಿ ಬಿಜೆಪಿ ಪಂಚಸೂತ್ರಗಳ ಅಡಿಯಲ್ಲಿ ಪಂಚಾಯತಿ ಚುನಾವಣೆಯಲ್ಲಿ ಗೆಲ್ಲುತ್ತೇವೆ. ಮುಂದೆ ತಾ.ಪಂ., ಜಿ.ಪಂ.ಚುನಾವಣೆಯಲ್ಲಿಯೂ ಜಯಭೇರಿ ಭಾರಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.

ಬಿಜೆಪಿ ಕರ್ನಾಟಕದ ವತಿಯಿಂದ ಕೋಟೇಶ್ವರದ ಸರಸ್ವತಿ ಕಲ್ಯಾಣ ಮಂಟಪದಲ್ಲಿ ನಡೆದ ಗ್ರಾಮ ಸ್ವರಾಜ್ಯ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ಪಕ್ಷದ ಸಾಮಾನ್ಯ ಕಾರ್ಯಕರ್ತ ನಾಯಕನಾಗುವುದೆ ಪಂಚಾಯತ್ ಚುನಾವಣೆ. ಅದನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಗ್ರಾಮ ಮಟ್ಟದಲ್ಲಿ ಸಾಧನೆ, ವಿಚಾರಧಾರೆಯ ಪರಿಶ್ರಮದ ಮೂಲಕ ಗೆಲುವು ಸಾಧಿಸುವುದು ಈ ಗ್ರಾಮ ಸ್ವರಾಜ್ಯ ಯಾತ್ರೆ. ರಾಮರಾಜ್ಯ ಮಹತ್ಮಾ ಗಾಂಧಿಯವರ ಕನಸು. ದೆಹಲಿ, ಮುಂಬಯಿ ಬೆಳೆದರೆ ರಾಮರಾಜ್ಯವಾಗದು. ಹಳ್ಳಿಗಳಲ್ಲಿಯೂ ಸ್ವರಾಜ್ಯದ ಕಲ್ಪನೆಯ ಬೆಳೆಯಬೇಕು ಎನ್ನುವುದು ಗಾಂಧಿಯವರ ಆಶಯವಾಗಿತ್ತು. ಆದರೆ ಕಾಂಗ್ರೆಸ್ ಪಕ್ಷ ಅಧಿಕಾರ, ಕುಟುಂಬ ರಾಜಕೀಯ ಲಾಲಸೆಯಿಂದಲೇ ಮುಂದುವರಿಯಿತು. ಇದೀಗ ಕೇಂದ್ರದಲ್ಲಿ ಮೋದಿಜಿ ನೇತೃತ್ವದ ಸರ್ಕಾರ ಗಾಂಧಿ ಕಂಡ ಸ್ವರಾಜ್ಯದ ಕಲ್ಪನೆ ನನಸು ಮಾಡುತ್ತಿದೆ ಎಂದರು.

ಇವತ್ತು ಜಗತ್ತೇ ಭಾರತದ ಕಡೆ ನೋಡುತ್ತಿದೆ. ಜಗತ್ತಿನಲ್ಲಿ ಭಾರತ ನಿರ್ಮಾಣ ಸಂಕಲ್ಪ ಈಡೇರಿದೆ. ಭ್ರಷ್ಟಚಾರದ ಕಳಂಕವಿಲ್ಲದೆ ಪ್ರಧಾನಿ ನರೇಂದ್ರ ಮೋದಿಯವರು ಆರುವರೆ ವರ್ಷ ಆಡಳಿತ ನೀಡುತ್ತಿದ್ದಾರೆ. ಪರಿವರ್ತನೆಗಳು ದೇಶದಲ್ಲಿ ಆಗುತ್ತಿದೆ. ಪಂಚಾಯತಿ ವ್ಯವಸ್ಥೆಗೆ ಬಲ ನೀಡುವ, ಅಧಿಕಾರ ನೀಡುವ ಕೆಲಸ ಆಗುತ್ತಿದೆ. ಪ್ರತಿ ಪಂಚಾಯತಿಗೆ 25 ಮನೆ, ಹಕ್ಕು ಪತ್ರಗಳನ್ನು ನೀಡುವ ಕೆಲಸ ಆಗುತ್ತಿದೆ. ಕರಾವಳಿಗೆ ವಿಶೇಷವಾದ ಮರಳು ನೀತಿ ತರಬೇಕು ಎನ್ನುವುದು ಡಾ|ವಿ.ಎಸ್.ಆಚಾರ್ಯರ ಕನಸಾಗಿತ್ತು. ಖಂಡಿತ ಅದನ್ನು ನಾವು ಈಡೇರಿಸುತ್ತೇವೆ ಎಂದರು.

ಅಭಿವೃದ್ದಿಯನ್ನು ಸಹಿಸದ ಕಾಂಗ್ರೆಸ್ ಟೀಕೆ ಮಾಡುತ್ತಿದೆ. ಕಾಂಗ್ರೆಸ್ ಆಡಳಿತ ಕಾಲ ನೆನಪಿಸಿಕೊಳ್ಳಿ. ಹಟ್ಟಿಯಲ್ಲಿ ಗೋವುಗಳನ್ನು ತಲವಾರು ತೋರಿಸಿ ಅಪಹರಿಸುತ್ತಿದ್ದರು. ಸಿದ್ಧರಾಮಯ್ಯನವರ ಸರ್ಕಾರ ಗೋಕಳ್ಳರಿಗೆ ರಕ್ಷಣೆ ನೀಡಿತು. ಗೋರಕ್ಷಕರಿಗೆ ರಕ್ಷಣೆ ನೀಡಲಿಲ್ಲ. 24 ಹಿಂದೂಗಳ ಹತ್ಯೆ ನಡೆಯಿತು. ಆಗ ಸಿದ್ಧರಾಮಯ್ಯನವರ ಕಣ್ಣಲ್ಲಿ ನೀರು ಬರಲಿಲ್ಲ. ಈಗ ಯಡಿಯೂರಪ್ಪನವರ ಸರ್ಕಾರದ ಅವಧಿಯಲ್ಲಿ ಒಂದೇ ಒಂದು ಹತ್ಯೆ ನಡೆದಿಲ್ಲ. ಕೋಮು ಸಂಘರ್ಷಗಳು ನಡೆದಿಲ್ಲ. ಡ್ರಗ್ಸ್, ಗಾಂಜಾ ಶಾಲಾ ಕಾಲೇಜುಗಳನ್ನು ವ್ಯಾಪಿಸಿತ್ತು. ಅದನ್ನು ಪತ್ತೆಹಚ್ಚಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಿದ್ದೇವೆ ಎಂದರು.

ಪಂಚಾಯತ್ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿದ್ದೇವೆ. ಈಗಾಗಲೇ 90% ಬೂತ್ಗಳಲ್ಲಿ ಪೇಜ್ ಪ್ರಮುಖ್, 80% ಬೂತ್ಗಳಲ್ಲಿ ಪಂಚಸೂತ್ರ ಅಳವಡಿಕೆ, 50% ಬೂತ್ಗಳಲ್ಲಿ ಕುಟುಂಬ ಮಿಲನ ಆಯೋಜಿಸಿದ್ದೇವೆ. ಪಂಚಾಯತ್ ಚುನಾವಣೆಗೆ ಸಕಲ ಸನ್ನದ್ಧವಾಗಿದ್ದೇವೆ ಎಂದರು.

ಉಪಮುಖ್ಯಮಂತ್ರಿ, ಉನ್ನತ ಶಿಕ್ಷಣ ಸಚಿವರು ಡಾ.ಅಶ್ವತ್ಥ್ ನಾರಾಯಣ್ ಮಾತನಾಡಿ, ಗ್ರಾಮಕ್ಕೆ ಮೂಲಭೂತ ಸೌಕರ್ಯ ಕಲ್ಪಿಸಿಕೊಡುವುದು ಮುಖ್ಯ. ಹಳ್ಳಿಗಳಿಂದ ಪಟ್ಟಣ ಪ್ರದೇಶಕ್ಕೆ ವಲಸೆ ಹೋಗುತ್ತಿರುವುದು ಕೂಡಾ ಹಳ್ಳಿಗಳಲ್ಲಿ ಇರದ ಮೂಲಸೌಲಭ್ಯ ಹಾಗೂ ಅವಕಾಶಗಳ ಕೊರತೆಯಿಂದ. ಹಳ್ಳಿಗಳಲ್ಲಿ ಎಲ್ಲಾ ರೀತಿಯ ಸೌಲಭ್ಯ, ಗುಣಮಟ್ಟದ ಸೇವೆಗಳು, ಆರ್ಥಿಕ ಸದೃಢತೆ, ಅವಕಾಶಗಳನ್ನು ಕಲ್ಪಿಸಿಕೊಟ್ಟಾಗ ವಲಸೆ ಪ್ರಮಾಣ ಕಡಿಮೆಯಾಗುತ್ತದೆ. ಸದೃಢವಾದ ದೇಶ ನಿರ್ಮಾಣವಾಗುತ್ತದೆ ಎಂದರು.

ದೇಶಕ್ಕೆ ಸ್ವಾತಂತ್ರ್ಯ ಪೂರ್ವದಲ್ಲಿ ತಿಲಕರ ಕಲ್ಪನೆಯೇ ಸ್ವರಾಜ್ಯ. ಮುಂದೆ ಮಹಾತ್ಮಾಗಾಂಧಿಯವರು ಇದಕ್ಕೆ ಒತ್ತು ನೀಡಿದರು. ಅದೇ ದಾರಿಯಲ್ಲಿ ಭಾರತೀಯ ಜನತಾ ಪಕ್ಷ ಗ್ರಾಮ ಸ್ವರಾಜ್ಯಕ್ಕೆ ದೊಡ್ಡ ಸಂಚಲನ ಮೂಡಿಸುವ ಕೆಲಸ ಮಾಡುತ್ತಿದೆ. ಗ್ರಾಮೀಣ ಪ್ರದೇಶಗಳ ಅಭಿವೃದ್ದಿಕ್ಕೆ ಕೇಂದ್ರ ಹಲವು ಯೋಜನೆಗಳನ್ನು ನೀಡುತ್ತಿದೆ. ಜಲಜೀವನ್ ಮಿಷನ್, ನರೇಗಾ, ಪ್ರಧಾನ ಮಂತ್ರಿ ಗ್ರಾಮ ಸಡಕ್, ಆಯುಷ್ಮಾನ್, ಅವಾಸ್ ಯೋಜನೆ, ರೈತರ ಕ್ರಿಯಾ ಯೋಜನೆ ಹೀಗೆ ಸಮಗ್ರವಾಗಿ ಗ್ರಾಮೀಣ ಭಾಗದ ಪ್ರಗತಿಗೆ ವ್ಯವಸ್ಥಿತ ಯೋಜನೆ ರೂಪಿಸಲಾಗುತ್ತಿದೆ. ಎಲ್ಲಾ ಕೆಲಸಗಳು ಗ್ರಾಮ ಮಟ್ಟದಿಂದಲೇ ಜನರಿಗೆ ಸಿಗಬೇಕು. ಅಂತಹ ವಾತಾವರಣ ನಿರ್ಮಾಣಕ್ಕೆ ನಾವು ಬದ್ಧರಾಗಿದ್ದೇವೆ ಎಂದರು.

ಕಳೆದ ಆರು ವರ್ಷಗಳಿಂದ ದೇಶದಲ್ಲಿ ಬಿಜೆಪಿ ಶಕ್ತಿಶಾಲಿಯಾಗಿ ಬೆಳೆದಿದೆ. ಜನರಲ್ಲಿ ಪರ್ಯಾಯ ಪಕ್ಷವೇ ಇಲ್ಲ ಎನ್ನುವ ಭಾವನೆ ಬರುವಂತೆ ನಾವು ಕೆಲಸ ಮಾಡಬೇಕು. ಗ್ರಾಮ ಮಟ್ಟದಲ್ಲಿ ಸೇವೆ ನೀಡಬೇಕು. ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಎಂದು ಅವರು ಹೇಳಿದರು.

ರಾಜ್ಯ ಉಪಾಧ್ಯಕ್ಷೆ ಮತ್ತು ಸಂಸದೆ ಶೋಭಾ ಕರಾದ್ಲಾಂಜೆ, ಸಂಸದ ಮುನಿಸ್ವಾಮಿ, ರಾಜ್ಯ ಪ್ರದಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ, ರಾಜ್ಯ ಮಹಿಳಾಮೋರ್ಚಾ ಅಧ್ಯಕ್ಷೆ ಗೀತಾ ವಿವೇಕಾನಂದ, ಕುಂದಾಪುರ ವಿಧಾನಸಭಾ ಕ್ಷೇತ್ರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಬೈಂದೂರು ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ರಘಪತಿ ಭಟ್, ಮಂಗಳೂರು ವಿಭಾಗೀಯ ಪ್ರಭಾರಿ ಉದಯಕುಮಾರ ಶೆಟ್ಟಿ, ಜಿ.ಪಂ.ಅಧ್ಯಕ್ಷ ದಿನಕರ ಬಾಬು, ಕರಾವಳಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಉಡುಪಿ ಜಿ.ಪಂ.ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಶಾಸಕ ಉಮಾನಾಥ್ ಕೋಟ್ಯಾನ್, ಬೈಂದೂರು ಮಂಡಳದ ಅಧ್ಯಕ್ಷ ದೀಪಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕುಂದಾಪುರ ಮಂಡಲದ ಅಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿದರು. ಜಿಲ್ಲಾ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಬೈಂದೂರು ಮಂಡಲದ ಅಧ್ಯಕ್ಷ ದೀಪಕ್ ಕುಮಾರ ಶೆಟ್ಟಿ ವಂದಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸದಾನಂದ ಉಪ್ಪಿನಕುದ್ರು ಕಾರ್ಯಕ್ರಮ ನಿರ್ವಹಿಸಿದರು.

Exit mobile version