Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರದಲ್ಲಿ ಬೈಂದೂರು ತಾಲೂಕು ಪಂಚಾಯತ್ ಸಭೆ: ಸಭೆಯಲ್ಲಿ ಸದಸ್ಯರ ಆಕ್ಷೇಪ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ನೂತನ ಬೈಂದೂರು ತಾಲೂಕು ರಚನೆಗೊಂಡು ಮೂರು ವರ್ಷ ಕಳೆದು, ತಾಲೂಕು ಪಂಚಾಯತ್ ರಚನೆಗೊಂಡು ಮೂರು ತಿಂಗಳು ಕಳೆದಿದೆ. ಇಷ್ಟರ ನಂತರವೂ ಬೈಂದೂರಿನಲ್ಲಿ ತಾಲೂಕು ಪಂಚಾಯತಿಗಾಗಿ ಒಂದು ಸುಸಜ್ಜಿತ ಕಟ್ಟಡವಿಲ್ಲ. ತಾಲೂಕು ಪಂಚಾಯತ್ ಸಾಮಾನ್ಯ ಸಭೆಯನ್ನು ಕುಂದಾಪುರದಲ್ಲಿ ನಡೆಸುವುದು ಸರಿಯಲ್ಲ ನಡೆಸುತ್ತಿರುವುದು ಸರಿಯಲ್ಲ.

ಇದು ಕುಂದಾಪುರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ಜರುಗಿದ ಬೈಂದೂರು ತಾಲೂಕಿನ 3ನೇ ಸಾಮಾನ್ಯ ಸಭೆಯಲ್ಲಿ ಕೇಳಿಬಂದ ಮಾತುಗಳು.

ಸದಸ್ಯ ಜಗದೀಶ್ ದೇವಾಡಿಗ ಕುಂದಾಪುರದಲ್ಲಿ ಸಭೆ ನಡೆಸುತ್ತಿರುವುದಕ್ಕೆ ಆಪ್ಷೇಕಿಸಿ, ಬೈಂದೂರಿನಲ್ಲಿಯೇ ಮುಂದಿನ ಸಭೆ ನಡೆಸುವಂತೆ ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಮಹೇಂದ್ರ ಪೂಜಾರಿ ಬೈಂದೂರು ತಾಲೂಕು ಪಂಚಾಯತಿಗೆ ಮೂಲಭೂತ ಸೌಕರ್ಯಗಳ ಕೊರತೆ ಇದ್ದು, ಸಭಾಂಗಣದ ವ್ಯವಸ್ಥೆ ಇಲ್ಲ. ಖಾಸಗಿ ಸಭಾಂಗಣದಲ್ಲಿ ಸಭೆ ನಡೆಸಿದರೆ ಗೌಪ್ಯತೆಗೆ ಧಕ್ಕೆಯಾಗಲಿದೆ. ಎ2 ತಂತ್ರಾಂಶವೂ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗಿಲ್ಲ. ಈ ಬಗ್ಗೆ ಕ್ಷೇತ್ರದ ಶಾಸಕರಿಗೂ ಮನವಿ ಸಲ್ಲಿಸಿದ್ದೇವೆ ಎಂದು ಸ್ಪಷ್ಟನೆ ನೀಡಿದರು.

ಗ್ರಾಮಸ್ಥರಿಗಿಲ್ಲ ಪಡಿತರ:
ಸದಸ್ಯೆ ಗಿರಿಜಾ ಖಾರ್ವಿ ಮಾತನಾಡಿ ಪಡುವರಿ ಗ್ರಾಮ ಪಂಚಾಯತ್ ಬೈಂದೂರು ಪಟ್ಟಣ ಪಂಚಾಯತ್ ಆದ ಬಳಿಕ ಇಲ್ಲನ ಗ್ರಾಮಸ್ಥರಿಗೆ ಪಡಿತರ ದೊರೆಯುತ್ತಿಲ್ಲ ಎಂಬ ವಿಷಯ ಪ್ರಸ್ತಾಪಿಸಿದಾಗ ಈಗ ವಿಚಾರ ಸಭೆಯಲ್ಲಿ ಚರ್ಚೆಯಾಗಿ ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ಸದಸ್ಯರು ತರಾಟೆಗೆ ತೆಗೆದುಕೊಂಡರು. ಬೈಂದೂರು ತಾಲೂಕಿನಲ್ಲಿ 35 ಪಡಿತರ ವಿತರಣಾ ಕೇಂದ್ರಗಳಿದ್ದು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿದ ಬಳಿಕ ಗ್ರಾಮಾಂತರದ ಪಡಿತರ ವಿತರಣೆಯ ಲೈಸನ್ಸ್‌ದಾರರ ಲಾಗಿನ್ ರದ್ದಾಗಿದೆ ಎಂದು ಆಹಾರ ನಿರೀಕ್ಷಕರು ಸ್ಪಷ್ಟನೆ ನೀಡಿದರು. ಪಟ್ಟಣ ಪಂಚಾಯತಿಯಲ್ಲಿ ಪಡಿತರ ವಿತರಿಸುವುದಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದಾಗ ಅದಕ್ಕೆ ಆಕ್ಷೇಪಿಸಿದ ಸ್ಥಾಯಿ ಸಮಿತಿ ಅಧ್ಯಕ್ಷ ಪುಪ್ಪರಾಜ ಶೆಟ್ಟಿ, ಸ್ಥಳೀಯಾಡಳಿತ ಸಂಸ್ಥೆಗಳು ಪಡಿತರ ವಿತರಿಸಲು ಯಾವುದೇ ಅಡ್ಡಿಯಿಲ್ಲ. ಪಟ್ಟಣ ಪಂಚಾಯತ್‌ನಿಂದ ಪಡಿತರ ತಡೆಹಿಡಿದಿರುವುದರಿಂದ ಬಡವರಿಗೆ ಅನ್ಯಾಯ ಮಾಡಿದಂತಾಗಿದೆ ಎಂದರು. ಸದಸ್ಯ ಪ್ರವೀಣ ಕುಮಾರ್ ಶೆಟ್ಟಿ ಕಡ್ಕೆ ಮಾತನಾಡಿ ಪಡಿತರ ಚೀಟಿ ವಿತರಿಸದೇ ಇರುವುದು ಹಾಗೂ ಪಡಿತರ ವಿತರಿಸದೇ ಇರುವುದು ಎರಡೂ ಅಪರಾಧವಾಗಿದ್ದು ಮುಖ್ಯಾಧಿಕಾರಿಯ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು. ಆಹಾರ ಇಲಾಖೆ ಸೂಚಿಸಿದರೆ ಪಡಿತರ ವಿತರಿಸುವುದಾಗಿ ಮುಖ್ಯಾಧಿಕಾರಿ ತಿಳಿಸಿದರು.

ಸೈನಿಕರಿಗಿಲ್ಲ ಭೂಮಿ:
ಸೇನೆಯಲ್ಲಿ ಸೇವೆ ಸಲ್ಲಿಸಿ ಹಿಂದಿರುಗುವ ಸೈನಿಕರಿಗೆ ಸರಕಾರ ಭೂಮಿ ನೀಡುವ ಕ್ರಮವಿದ್ದು ಅರ್ಜಿ ಸಲ್ಲಿಸಿದ ಸೈನಿಕರಿಗೆ ಈವರೆಗೆ ಭೂಮಿ ಹಂಚಿಕೆಯಾಗಿಲ್ಲ. ಈ ಬಗ್ಗೆ ಆಕ್ಷೇಪಿಸಿದ ಅಧ್ಯಕ್ಷ ಮಹೇಂದ್ರ ಪೂಜಾರಿ ನಾವು ಸಾಮಾಜಿಕ ಜಾಲತಾಣದಲ್ಲಿ ಸೈನಿಕರನ್ನು ಗೌರವಿಸಿದರಷ್ಟೇ ಸಾಲದು, ವಾಸ್ತವವಾಗಿಯೂ ಅವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಈ ನೆಲೆಯಲ್ಲಿ ಬೈಂದೂರು ಕಂದಾಯ ಇಲಾಖೆ ಹಾಗೂ ತಹಶೀಲ್ದಾರರು ಶೀಘ್ರ ಸ್ಪಂದಿಸಬೇಕು. ಸರಕಾರಿ ಜಾಗವನ್ನು ಗುರುತಿಸಿ ಹಂಚಿಕೆ ಮಾಡಲು ಕ್ರಮವಹಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಉಪತಹಶೀಲ್ದಾರ್, ಸರಕಾರಿ ಭೂಮಿಯನ್ನು ಗುರುತಿಸಿ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಬೈಂದೂರು ಸರಕಾರಿ ಆಸ್ಪತ್ರೆಗೆ ಕೊಲ್ಲೂರು ದೇವಸ್ಥಾನದ ಮೂಲಕ ಡಯಾಲಿಸಿಸ್ ಯಂತ್ರ ಕೊಡುಗೆಯಾಗಿ ನೀಡುವ ಬಗ್ಗೆ ಮುಜರಾಯಿ ಸಚಿವರು ತಿಳಿಸಿರುವ ಬಗ್ಗೆ ತಾಪಂ ಅಧ್ಯಕ್ಷರು ಪ್ರಸ್ಥಾಪಿಸಿದ್ದು, ಸರಕಾರಿ ಆಸ್ಪತ್ರೆಯಲ್ಲಿಯೇ ಬಿ. ಆರ್. ಶೆಟ್ಟಿ ಟ್ರಸ್ಟ್ ಮೂಲಕ ನಿರ್ವಹಣೆ ಮಾಡಿಸುವುದಾಗಿ ತಾಲೂಕು ಆರೋಗ್ಯಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದರು.

ಸಭೆಯಲ್ಲಿ ಕುಂದಾಪುರ ಸರಕಾರ ಆಸ್ಪತ್ರೆ ವೈದ್ಯಾಧಿಕಾರಿಯ ಕರ್ತವ್ಯ ಲೋಪ, ಆಸ್ಪತ್ರೆ ಆವರಣದೊಳಗಿನ ದೇವಸ್ಥಾನದ ಲೆಕ್ಕಪತ್ರದಲ್ಲಿ ವ್ಯತ್ಯಾಸವಾಗಿರುವುದು, ಗ್ರಾಮ ಪಂಚಾಯತಿಗಳಲ್ಲಿ ಪಿಡಿಓ ಇಲ್ಲದಿರುವುದು ಸೇರಿದಂತೆ ವಿವಿಧ ವಿಚಾರಗಳ ಬಗೆಗೆ ಚರ್ಚೆಯಾಯಿತು.

ತಾಲೂಕು ಪಂಚಾಯತ್ ಅಧ್ಯಕ್ಷ ಮಹೇಂದ್ರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಮಾಲಿನಿ ಕೆ., ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಪುಷ್ಪರಾಜ ಶೆಟ್ಟಿ, ಬೈಂದೂರು ಇಒ ಭಾರತಿ, ಕುಂದಾಪುರ ಇಒ ಕೇಶವ ಶೆಟ್ಟಿಗಾರ್ ಇದ್ದರು.

Exit mobile version