Kundapra.com ಕುಂದಾಪ್ರ ಡಾಟ್ ಕಾಂ

ಪಂಜು ಗಂಗೊಳ್ಳಿ ಅವರ ‘ಕುಂದಾಪ್ರ ಕನ್ನಡ ನಿಘಂಟು’ ಹಿಗ್ಗು – ಅರಿವಿನಮಾಲೆ ಪುಸ್ತಕ ದತ್ತಿಗೆ ಆಯ್ಕೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಹಿರಿಯ ವ್ಯಂಗ್ಯಚಿತ್ರಕಾರ ಪಂಜು ಗಂಗೊಳ್ಳಿ ಅವರು ಸಂಪಾದಿಸಿರುವ ‘ಕುಂದಾಪ್ರ ಕನ್ನಡ ನಿಘಂಟು’ನ್ನು ತಲ್ಲೂರು ಫ್ಯಾಮಿಲಿ ಟ್ರಸ್ಟ್ ಸ್ಥಾಪಿಸಿರುವ ಹಿಗ್ಗು – ಅರಿವಿನ ಮಾಲೆ ಪುಸ್ತಕ ದತ್ತಿಯ ಚೊಚ್ಚಲ ಗ್ರ್ಯಾಂಟ್‌ಗೆ ಆಯ್ಕೆಮಾಡಲಾಗಿದೆ ಎಂದು ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಆಡಳಿತ ಟ್ರಸ್ಟಿ ಸುರೇಶ್ ತಲ್ಲೂರು ತಿಳಿಸಿದ್ದಾರೆ.

ಅವರು ಶುಕ್ರವಾರ ಕುಂದಾಪುರದಲ್ಲಿ ಜರುಗಿದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಹಿಗ್ಗು – ಅರಿವಿನ ಮಾಲೆ ಪುಸ್ತಕ ದತ್ತಿ ಯೋಜನೆಯಡಿ 2 ಲಕ್ಷ ರೂ.ಗಳ ದತ್ತಿಯನ್ನು ನಿಘಂಟು ಪ್ರಕಾಶನಕ್ಕೆ ನೀಡಲಾಗುತ್ತದೆ. ಮುಂಬೈನ ಬುಸಿನೆಸ್ ಇಂಡಿಯಾ ಪತ್ರಿಕೆಯಲ್ಲಿ ಕಾರ್ಟೂನಿಷ್ಠ್ ಆಗಿರುವ ಪಂಜು ಗಂಗೊಳ್ಳಿ ಅವರು ಸುಮಾರು 10,000 ಮಿಕ್ಕಿದ ಕುಂದಾಪ್ರ ಕನ್ನಡದ ಪದಗಳು ಮತ್ತು 1,700ಕ್ಕೂ ಮಿಕ್ಕಿದ ನುಡಿಗಟ್ಟುಗಳು, ಕುಂದಾಪ್ರ ಕನ್ನಡದ ರೀತಿ ರಿವಾಜು, ಕಟ್ಟುಪಾಡು, ಆಚರಣೆಗಳ ಮಾಹಿತಿ ಒಳಗೊಂಡಿರುವ ಅಂದಾಜು 700 ಪುಟಗಳಾಗುಷ್ಟು ಸಾಂಸ್ಕೃತಿಕ ಶಬ್ದಕೋಶವನ್ನು ಸಿದ್ದಪಡಿಸಿದ್ದಾರೆ. ಈ ಪುಸ್ತಕಕ್ಕೆ ದತ್ತಿನಿಧಿ ನೀಡಿ ಪ್ರಕಾಶಿಸುವ ಮೂಲಕ ವಿಶ್ವವಿದ್ಯಾನಿಲಯ ಮಾಡಬೇಕಾದ ಕೆಲಸವನ್ನು ಟ್ರಸ್ಟ್ ಮಾಡುತ್ತಿದೆ. ಎಂದರು.

ಇನ್ನೋರ್ವ ಟ್ರಸ್ಟಿ ರಾಜರಾಮ ತಲ್ಲೂರು ಮಾತನಾಡಿ ಕರಾವಳಿ ಕಟ್ಟು ಚಳುವಳಿಯ ಭಾಗವಾಗಿ ಈಗಾಗಲೇ ತಲ್ಲೂರು ನುಡಿಮಾಲೆ ದತ್ತಿನಿಧಿ ಉಪನ್ಯಾಸಗಳು ನಡೆದಿವೆ. ಕೊರೋನಾ ಕಾಲದಲ್ಲಿ ರಚಿಸಲಾದ ಶೈಕ್ಷಣಿಕ ವೀಡಿಯೋ ಸರಣಿಗಳು ವಿದ್ಯಾರ್ಥಿಗಳಿಗೆ ಸಾಕಷ್ಟು ಉಪಯೋಗವಾಗಿದೆ. ಈ ಚಳುವಳಿಯ ಮುಂದುವರಿದ ಭಾಗವಾಗಿ ಹಿಗ್ಗು – ಅರಿವಿನ ಮಾಲೆ ಯೋಜನೆ ರೂಪಿಸಲಾಗಿದೆ ಎಂದ ಅವರು, ಕುಂದಾಪ್ರ ಕನ್ನಡ ನಿಘಂಟು ಪ್ರಕಟಣೆಗೆ ಅಂದಾಜು 5 ಲಕ್ಷ ರೂ. ವೆಚ್ಚವಾಗಲಿದ್ದು, 2 ಲಕ್ಷ ರೂ. ದತ್ತಿನಿಧಿ ಬಳಸಿಕೊಂಡು ಉಳಿದ ಮೊತ್ತವನ್ನು ಪ್ರೊಡಿಜಿ ಪ್ರಕಾಶನ ಹಾಗೂ ಸಾರ್ವಜನಿಕರಿಗೆ ಪ್ರೀ-ಆರ್ಡ್‌ರ್ ಮೂಲಕ ಖರಿದಿಸುವ ಅವಕಾಶ ನೀಡಿ ಭರಿಸುವ ಯೋಜನೆ ಇದೆ ಎಂದು ವಿವರಿಸಿದರು.

ಟ್ರಸ್ಟೀಗಳಾದ ಸದಾನಂದ ತಲ್ಲೂರು, ವಸಂತ ಶ್ಯಾನುಭಾಗ್, ಅಂತರಾಷ್ಟ್ರೀಯ ಕಲಾವಿದ ಎಲ್.ಎನ್. ತಲ್ಲೂರು ಉಪಸ್ಥಿರಿದ್ದರು.

Exit mobile version