ಕುಂದಾಪ್ರ ಡಾಟ್ ಕಾಂ ಸುದ್ದಿ.
ಬೈಂದೂರು: ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಾಂಪ್ರದಾಯಿಕ ಬೆಂಬಲಿಗರ ಮನಸ್ಸಿನಲ್ಲಿ ಭಾರತೀಯ ಜನತಾ ಪಕ್ಷ ಭಾವನಾತ್ಮಕ ವಿಚಾರಗಳನ್ನು ಮತ್ತು ಸುಳ್ಳುಗಳನ್ನು ತುಂಬಿ ತನ್ನತ್ತ ಸೆಳೆದಿದೆ. ಇಲ್ಲಿ ಕಾಂಗ್ರೆಸ್‌ಗೆ ಹಿನ್ನಡೆಯಾಗಲು ಇದು ಪ್ರಮುಖ ಕಾರಣ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕಕುಮಾರ ಕೊಡವೂರು ಹೇಳಿದರು.
ಗುರುವಾರ ಮರವಂತೆಯಲ್ಲಿ ನಡೆದ ಬೈಂದೂರು ಬ್ಲಾಕ್ ಕಾಂಗ್ರೆಸ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಈ ಜಿಲ್ಲೆಗಳಲ್ಲಿನ ಗೇಣಿದಾರರ ಮತ್ತು ಮೀನುಗಾರರ ಅಭಿವೃದ್ಧಿಗೆ ಹಿಂದಿನ ಕಾಂಗ್ರೆಸ್ ಸರ್ಕಾರಗಳು ಕ್ರಾಂತಿಕಾರಕ ಕ್ರಮಗಳನ್ನು ಜಾರಿಗೊಳಿಸಿದ್ದುವು. ಈಚಿನ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ, ಬಡವರ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಅನುಷ್ಠಾನಿಸಿತು. ಆದರೆ ಅವು ಇಲ್ಲಿ ಕಾಂಗ್ರೆಸ್‌ಗೆ ಮತ ತಂದುಕೊಡುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರು ಜನರೊಂದಿಗೆ ಬೆರೆತು ಅವರಿಗೆ ವಾಸ್ತವಾಂಶಗಳನ್ನು ಮನದಟ್ಟು ಮಾಡಬೇಕು ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಮಾತನಾಡಿ ಈ ತಿಂಗಳಿನಲ್ಲಿ ನಡೆಯುವ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷದ ಕ್ರಿಯಾಶೀಲ ಮತ್ತು ಸಮರ್ಥ ಕಾರ್ಯಕರ್ತರನ್ನು ಅಭ್ಯರ್ಥಿಗಳಾಗಿ ನಿಲ್ಲಿಸಲಾಗುವುದು. ಎಲ್ಲ ನಾಯಕರು ಮತ್ತು ಕಾರ್ಯಕರ್ತರು ಅವರ ಯಶಸ್ಸಿಗೆ ಒಗ್ಗಟ್ಟಿನಿಂದ ದುಡಿಯಬೇಕು ಎಂದು ಹೇಳಿದರು.
ಕಾಂಗ್ರೆಸ್ ಸೇರಿದ ಮರವಂತೆ ಗ್ರಾಮ ಪಂಚಾಯಿತಿಯ ಮಾಜಿ ಉಪಾಧ್ಯಕ್ಷ, ಬಿಜೆಪಿ ಧುರೀಣ ಗಣೇಶ ಪೂಜಾರಿ ಮತ್ತು ಬೆಂಬಲಿಗರನ್ನು ಸ್ವಾಗತಿಸಲಾಯಿತು. ನಾಡ ಗ್ರಾಮ ಸಮಿತಿ ಅಧ್ಯಕ್ಷರಾಗಿ ನೇಮಕಗೊಂಡ ಅರವಿಂದ ಪೂಜಾರಿ ಅವರಿಗೆ ನೇಮಕಾತಿ ಪತ್ರ ನೀಡಲಾಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್. ಮದನ್‌ಕುಮಾರ್, ಕೆಪಿಸಿಸಿ ಸದಸ್ಯ ಎಸ್. ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎಸ್. ರಾಜು ಪೂಜಾರಿ ಪಕ್ಷದ ಪ್ರಮುಖರಾದ ಗೌರಿ ದೇವಾಡಿಗ, ರಘುರಾಮ ಶೆಟ್ಟಿ, ರಮೇಶ ಗಾಣಿಗ, ಜಗದೀಶ ದೇವಾಡಿಗ, ಶೇಖರ ಪೂಜಾರಿ, ಎಂ. ವಿನಾಯಕ ರಾವ್, ಎಂ. ಅಣ್ಣಪ್ಪ ಬಿಲ್ಲವ ಇದ್ದರು.
ಇದನ್ನೂ ಓದಿ:
► ಕುಂದಾಪುರ: ಹಿರಿಯ ಬಿಜೆಪಿ ಮುಖಂಡೆ ಜಾನಕಿ ಬಿಲ್ಲವ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ – https://kundapraa.com/?p=42985 .

