Kundapra.com ಕುಂದಾಪ್ರ ಡಾಟ್ ಕಾಂ

ಕುಂದಾಪುರ: ಲೋಕಾರ್ಪಣೆಗೆ ಸಿದ್ಧಗೊಂಡ ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಕುಂದಾಪುರದಲ್ಲಿ ಪ್ರಸಿದ್ದಿ ಪಡೆದಿದ್ದ ರಾಮಕೃಷ್ಣ ಆಸ್ಪತ್ರೆಯು ಆಯುಷ್ ಧಾಮ ಆರ್ಥೋ ನ್ಯೂರೋ ಆಸ್ಪತ್ರೆಯಾಗಿ ಡಿ.9ರ ಬುಧವಾರ ಲೋಕಾರ್ಪಣೆಗೊಳ್ಳಲಿದೆ.

ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು ಎರಡು ದಶಕಕ್ಕೂ ಹೆಚ್ಚು ಅನುಭವವಿರುವ ಮತ್ತು ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ, ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಮತ್ತು ಪ್ರಸ್ತುತ ಬ್ರಹ್ಮಾವರದ ಕ್ಷೇಮಧಾಮ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ. ಬಿ.ವಿನಯಚಂದ್ರ ಶೆಟ್ಟಿ ತನ್ನ ಅನುಭವಿ ವೈದ್ಯ ತಂಡದೊಂದಿಗೆ ಈ ಆಸ್ವತ್ರೆಯನ್ನು ಮುನ್ನಡೆಸಲಿದ್ದಾರೆ.

ಕರ್ನಾಟಕದ ಹೆಸರಾಂತ ವೈದ್ಯರ ಜೊತೆ ಕೇರಳ, ತಮಿಳುನಾಡು, ಪುಣೆ, ಆಂಧ್ರಪ್ರದೇಶದಂತಹ ರಾಜ್ಯಗಳ ಸಂದರ್ಶಕರು ನಿಯಮಿತವಾಗಿ ಸಂದರ್ಶನ ಮತ್ತು ಸಮಾಲೋಚನೆಗೆ ಲಭ್ಯವಿರಲಿದ್ದಾರೆ.

ಕೇವಲ ಒಂದು ಪದ್ದತಿಯ ಚಿಕಿತ್ಸೆ ಪರಿಣಾಮಕಾರಿಯಾದ ಫಲಿತಾಂಶ ನೀಡುವಲ್ಲಿ ವಿಫಲವಾಗುತ್ತಿರುವಾಗ ಆಯುರ್ವೇದ, ಯೋಗ ಮತ್ತು ಬೇರೆ ಪಾರಂಪರಿಕ ಚಿಕಿತ್ಸಾ ಪದ್ದತಿಗಳ ಸಂಯೋಜನಾ ಚಿಕಿತ್ಸಾ ಪರಿಕ್ರಮ ನಿರೀಕ್ಷಿತ ಫಲಿತಾಂಶ ತೋರಿಸುತ್ತದೆ. ಆ ಸಂಯೋಜನಾ ಚಿಕಿತ್ಸಾ ಪದ್ದತಿ ಇಲ್ಲಿ ಅಳವಡಿಸಿಕೊಂಡು ಗುಣಾತ್ಮಕ ಫಲಿತಾಂಶ ನೀಡಲು ಪ್ರಯತ್ನಿಸಲಾಗುತ್ತದೆ.

ಆಸ್ಪತ್ರೆಯಲ್ಲಿ ಸುಸಜ್ಜಿತ ಒಳರೋಗಿ ಮತ್ತು ಹೊರರೋಗಿ ವಿಭಾಗ, ತಜ್ಞ ವೈದ್ಯರುಗಳ ಗುಣಮಟ್ಟದ ಸೇವೆ, ಕುಟುಂಬ ವೈದ್ಯ ಕ್ಲಿನಿಕ್, ಸುಖ ಚಿಕಿತ್ಸಾ ವಿಭಾಗ, ಆಯುರ್ವೇದ, ಯೋಗ, ನ್ಯಾಚುರೋಪತಿ, ಫಿಸಿಯೋಥೆರಪಿ, ಸಂಯೋಜನಾ ಚಿಕಿತ್ಸಾ ಪರಿಕ್ರಮ, ಮರ್ಮ ಚಿಕಿತ್ಸೆ, ಕೇರಳೀಯ ಪಂಚಕರ್ಮ ಮತ್ತು ಕ್ಷಾರಸೂತ್ರ, ಸುಸಜ್ಜಿತ ಪ್ರಯೋಗಾಲಯ ಮತ್ತು ಔಷಧಾಲಯ ಸೇರಿದಂತೆ ವಿವಿಧ ಸೌಲಭ್ಯಗಳು ಲಭ್ಯವಿರಲಿದೆ.

ಉಚಿತ ಆರೋಗ್ಯ ಶಿಬಿರ
ಆಯುಷ್‌ಧಾಮ ಆರ್ಥೋ ನ್ಯೂರೋ ಆಸ್ಪತ್ರೆಯಿಂದ ಉಚಿತ ಆರೋಗ್ಯ ಶಿಬಿರವು ಡಿ.09ರಿಂದ 13ರವರೆಗೆ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಆಸ್ಪತ್ರೆಯ ಆವರಣದಲ್ಲಿ ನಡೆಯಲಿದೆ.

ಮೂಡುಬಿದ್ರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ, ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಉಚಿತ ಸಂದರ್ಶನ, ಸಮಾಲೋಚನೆ ಮತ್ತು ಚಿಕಿತ್ಸೆ, ಉಚಿತ ರಕ್ತ ಮತ್ತು ಮೂತ್ರ ಪರೀಕ್ಷೆ, ಯೋಗ ಪ್ರಣಾಯಾಮ – ಷಟ್‌ಕ್ರಿಯಾ ಕ್ರಮಗಳ ಪರಿಚಯ, ಸ್ವಸ್ಥ ಮತ್ತು ರೋಗಿಯಲ್ಲಿ ಫಿಸಿಯೋಥೆರಪಿಯ ಪಾತ್ರ – ಪ್ರಾತ್ಯಕ್ಷಿಕೆ ಸೌಲಭ್ಯಗಿಳಿವೆ. ವಿವಿಧ ಆರೋಗ್ಯ ಸಮಸ್ಯೆಗಳಿಗೆ ತಪಾಸಣೆ, ಚಿಕಿತ್ಸೆ ಮತ್ತು ಪರಿಹಾರೋಪಾಯ ಲಭ್ಯವಿರಲಿದೆ.

ಉಚಿತ ಆರೋಗ್ಯ ಶಿಬಿರದ ಸಂಪೂರ್ಣ ಪ್ರಯೋಜನವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕಾಗಿ ಆಯುಷ್‌ಧಾಮ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಬಿ. ವಿನಯಚಂದ್ರ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

 

Exit mobile version