Site icon Kundapra.com ಕುಂದಾಪ್ರ ಡಾಟ್ ಕಾಂ

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ಗೆ ತೆಕ್ಕಟ್ಟೆಯಲ್ಲಿ ಪಂಚಕರ್ಮ ಚಿಕಿತ್ಸೆ

ಕುಂದಾಪ್ರ ಡಾಟ್ ಕಾಂ ಸುದ್ದಿ.
ಕುಂದಾಪುರ: ಉತ್ತರ ಪ್ರದೇಶದ ಉನ್ನವೊ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಬಿಜೆಪಿಯ ಹಿರಿಯ ಸಂಸದ ಸಾಕ್ಷಿ ಮಹಾರಾಜ್ ತೆಕ್ಕಟ್ಟೆಯ ಸಮೀಪದ ಕೊಮೆಯಲ್ಲಿ ಡಾ.ತನ್ಮಯ ಗೋಸ್ವಾಮಿ ನಡೆಸುತ್ತಿರುವ ಆಯುರ್ವೇದ ಆಶ್ರಮದಲ್ಲಿ ಪಂಚಕರ್ಮ ಹಾಗೂ ಪ್ರಕೃತಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ.

ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಉತ್ತರ ಪ್ರದೇಶದಿಂದ ದೂರದ ಕರ್ನಾಟಕದ ಕರಾವಳಿಯ ಸೊಬಗಿಗೆ ಮನಸೋತು ಇಲ್ಲಿಗೆ ಬಂದಿರುವುದೇ ವಿಶೇಷ. ದೇಶದ ಕೆಲವೇ ಮಂದಿಗೆ ಇರುವ ವೈ – ಪ್ಲಸ್ ಭದ್ರತೆಯನ್ನು ಹೊಂದಿರುವ ಅವರು ಇದನ್ನೆಲ್ಲ ಮರೆತು ಆಯುರ್ವೇದ ಆಶ್ರಮದ ವೈದ್ಯ ಡಾ. ತನ್ಮಯ ಗೋಸ್ವಾಮಿ ಅವರ ಸಲಹೆಗೆ ಮೈ ಚೆಲ್ಲಿ ವಿಶ್ರಾಂತಿ ಅನುಭವಿಸುತ್ತಿದ್ದಾರೆ.

ಸಾಕ್ಷಿ ಮಹಾರಾಜ್ ಅವರಿಗೆ ನೀಡುತ್ತಿರುವ ಚಿಕಿತ್ಸೆಯ ಬಗ್ಗೆ ಮಾತನಾಡಿದ ಆಶ್ರಮದ ಮುಖ್ಯಸ್ಥ ಡಾ.ತನ್ಮಯ್ ಗೋಸ್ವಾಮಿ ಬೆಳಿಗ್ಗೆ ಯೋಗಾಭ್ಯಾಸದಿಂದ ಚಿಕಿತ್ಸೆ ಪ್ರಾರಂಭವಾಗುತ್ತದೆ. ಮಧ್ಯಾಹ್ಮದವರೆಗೂ ಪಂಚಕರ್ಮದ ಪದ್ಧತಿಯಲ್ಲಿ ಚಿಕಿತ್ಸೆ ನೀಡಿ ದೇಹವನ್ನು ಹದಗೊಳಿಸಲಾಗುತ್ತದೆ. ಮಧ್ಯಾಹ್ಮ ಹಾಗೂ ರಾತ್ರಿ ಲಘು ಆಹಾರ. ಸಂಜೆ ಧ್ಯಾನ ಹಾಗೂ ಸಮುದ್ರ ದಂಡೆಯಲ್ಲಿ ವಾಯುವಿಹಾರ ನೀಡಲಾಗುತ್ತದೆ. 65 ವರ್ಷ ದಾಟಿರುವ ಸಾಕ್ಷಿ ಮಹಾರಾಜ್ ಅವರಿಗೆ ಯಾವುದೇ ನಿರ್ದಿಷ್ಟ ಆರೋಗ್ಯ ಸಮಸ್ಯೆಗಳಿಲ್ಲ. ವಯೋಸಹಜ ನರ ಹಾಗೂ ದೇಹ ಬಲವರ್ಧನೆಗಾಗಿ 1 ವಾರದ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

Exit mobile version