ಕುಂದಾಪ್ರ ಡಾಟ್ ಸುದ್ದಿ.
ಬೈಂದೂರು: ಶ್ರೀ ಗುರು ನಿತ್ಯಾನಂದ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ನಾವುಂದ ಇದರ ಎಂಟನೇ ವಾರ್ಷಿಕ ಮಹಾಸಭೆಯು ಕಿರಿಮಂಜೇಶ್ವರದ ಶುಭದಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಜರಗಿತು.
ಸಹಕಾರಿಯ ಅಧ್ಯಕ್ಷ ಡಾ. ಎನ್. ಕೆ ಬಿಲ್ಲವ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೋವಿಡ್-19 ಕಾರಣದಿಂದಾಗಿ ಸಾಲ ವಸೂಲಾತಿಯಲ್ಲಿ ಗುರಿ ಸಾಧನೆಯಾಗದಿದ್ದರೂ ಸದಸ್ಯರ ಹೊರಬಾಕಿ ಸಾಲ ಮತ್ತು ಠೇವಣಿ ಸಂಗ್ರಹಣೆ ಹೆಚ್ಚಳವಾಗಿದ್ದು 2019-20ರ ಲೆಕ್ಕಪರಿಶೋಧನಾ ವರದಿಯಲ್ಲಿ ಎ ಶ್ರೇಣಿಯ ಗೌರವವನ್ನು ಪಡೆದಿರುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಸಾಲಗಾರ ಸದಸ್ಯರು ವಾಯ್ದೆಗೆ ಸರಿಯಾಗಿ ಸಾಲ ಮರುಪಾವತಿ ಮಾಡಿ ಸಹಕಾರಿಯ ಏಳಿಗೆಗೆ ಸಹಕರಿಸಬೇಕೆಂದು ಹಾಗೂ ಸಂಘದ ಏಳಿಗೆಗಾಗಿ ಪ್ರತಿಯೊಬ್ಬ ಸದಸ್ಯರು ನಮ್ಮೊಂದಿಗೆ ಕೈ ಜೋಡಿಸಬೇಕು ಎಂದರು.
ಸಹಕಾರಿಯ ಕಾರ್ಯದರ್ಶಿ ಪೂಜಾ ಟಿ ವಾರ್ಷಿಕ ವರದಿ ಓದಿದರು, ನಂತರ 2020-21ನೇ ಸಾಲಿನ ಅಂದಾಜು ಆಯ – ವ್ಯಯ, ಅನುಪಾಲನಾ ವರದಿಗೆ ಅನುಮೋದನೆ ಸಭೆಯಲ್ಲಿ ಪಡೆಯಲಾಯಿತು. ಸಹಕಾರಿಯ ಲಾಭಾಂಶಗಳನ್ನು ಉಪವಿಧಿಗನುಸಾರವಾಗಿ ವಿಂಗಡಿಸಲಾಯಿತು.
ಸಭೆಯಲ್ಲಿ ಉಪಾಧ್ಯಕ್ಷ ಶೇಖರ ಎಮ್ ಪೂಜಾರಿ, ನಿರ್ದೇಶಕರಾದ ಮಂಜು ಪೂಜಾರಿ, ಯೋಗಿಶ್ ಕಾರಂತ್, ಶುಭದಾ ಬಿಲ್ಲವ, ಸುರೇಶ್ ಕೆ ಪೂಜಾರಿ, ಸಾವಿತ್ರಿ ಪೂಜಾರಿ, ಗೌರವ ಸಲಹೆಗಾರ ಕೆ ಪುಂಡಲೀಕ ನಾಯಕ್ ಹಾಗೂ ಸಹಕಾರಿಯ ವಸೂಲಾತಿ ಅಧಿಕಾರಿ ಆರ್ ಕೆ ಬಿಲ್ಲವ ಉಪಸ್ಥಿತರಿದ್ದರು. ಆರಂಭದಲ್ಲಿ ಮಂಜಮ್ಮ ಶೇಡ್ತಿ ಮತ್ತು ಹೆರಿಯಕ್ಕ ಪ್ರಾರ್ಥನೆ ಮಾಡಿದರು, ತಿಮ್ಮಪ್ಪ ಪೂಜಾರಿ ಸ್ವಾಗತಿಸಿದರು, ಪೂಜಾ ಟಿ ವಂದಿಸಿದರು.
